ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಹಿರ್ದೆಸೆಗೆಂದು ಹೋದ ಮಗ ಒಂದು ತಿಂಗಳು ಕಳೆದರೂ, ಮನೆಗೆ ವಾಪಸ್ ಬಾರದ ಪ್ರಕರಣ ತಡವಾಗಿ ಬೆಳಕಿಗೆ ನಡೆದಿದೆ. ಮಗ ನಾಪತ್ತೆಯಾಗಿ ಒಂದು ತಿಂಗಳು ಕಳೆದಿದ್ದು, ಆತನನ್ನು ಹುಡುಕಿಕೊಡುವಂತೆ ತಾಯಿ ಇದೀಗ ಪೊಲೀಸರ ಬಳಿ ಕಣ್ಣೀರಿಟ್ಟಿದ್ದಾಳೆ. ನಗರದ ಐಎಂಪಿ ಕಂಪನಿಯಲ್ಲಿ ಲೇಬರ್ ಆಗಿ ಕೆಲಸ ಮಾಡುತ್ತಿದ್ದ ಬೈತಖೋಲದ ನಿವಾಸಿ 36 ವರ್ಷದ ಸಂಜಯ ಹೆದ್ದು ಗೌಡ ನಾಪತ್ತೆಯಾಗಿರುವ ಯುವಕ.
ಪ್ರತಿನಿತ್ಯ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದ ಸಂಜಯ್, ಕಳೆದ ಮೇ14 ರಂದು ಕೆಲಸ ಮುಗಿಸಿ ಬಂದವನೇ ಮನೆಯ ಹತ್ತಿರದ ಪರಿಚಯಸ್ಥರ ಮನೆಗೆ ಮದುವೆ ಚಪ್ಪರ ಹಾಕಲೆಂದು ಹೋಗಿದ್ದ. ರಾತ್ರಿ 8 ಗಂಟೆ ವೇಳೆಗೆ ಗಾಬರಿಯಿಂದ ಮನೆಗೆ ವಾಪಸ್ ಬಂದು ನೀರಿನ ಬಾಟಲ್ ಹಿಡಿದು ಮನೆಯ ಹಿಂಬದಿಯಲ್ಲಿನ ಗುಡ್ಡದ ಕಡೆಗೆ ಶೌಚಕ್ಕೆಂದು ತೆರಳಿದವನು ಬಳಿಕ ವಾಪಸಾಗಿಲ್ಲ. ಮಗ ಮನೆಗೆ ಬಂದಿಲ್ಲವೆಂದು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ ತಾಯಿ ಹುಡುಕಾಟ ನಡೆಸಿದ್ದಾರೆ. ಬಳಿಕ ಕಾರವಾರ ನಗರ ಠಾಣೆಯಲ್ಲಿ ದೂರು ಸಹ ನೀಡಿದ್ದರು.
ಆದರೆ ದೂರು ನೀಡಿ ತಿಂಗಳಾಗಿದ್ದು, ಪೊಲೀಸರು ಮಗನನ್ನು ಹುಡುಕಿ ಕೊಡದ್ದಕ್ಕೆ ಎಸ್ಪಿ ಕಚೇರಿಗೆ ತೆರಳಿದ ವೃದ್ಧೆ, ಆತನನ್ನು ಹುಡುಕಿ ಕೊಡುವಂತೆ ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ವೃದ್ಧೆ ಇಂದು ಅವರ ಪತಿ ಸಹ ಮೃತಪಟ್ಟಿದ್ದು, ಸಂಜಯ್ ಒಬ್ಬನೇ ಮಗನಾಗಿದ್ದ. ಕುಟುಂಬಕ್ಕೆ ಆಧಾರವಾಗಿದ್ದ ಮಗನೇ ಇದೀಗ ನಾಪತ್ತೆಯಾಗಿದ್ದು ಹೇಗೆ ಜೀವನ ನಡೆಸುವುದು ಅಂತಾ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಮದುವೆಗೆ ತೆರಳುತ್ತಿದ್ದ ವಾಹನ ಅಪಘಾತ: ಓರ್ವ ಮಹಿಳೆ ಸಾವು, ನಾಲ್ವರು ಗಂಭೀರ
ಆತ ಎಲ್ಲಿ ಹೋಗಿದ್ದಾನೆ, ಆತನಿಗೆ ಏನಾಗಿದೆ ಎನ್ನುವುದೇ ತಿಳಿಯುತ್ತಿಲ್ಲ. ಮಗನನ್ನ ಹುಡುಕಿಕೊಡಿ ಎಂದು ವೃದ್ಧೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ಬಳಿ ಕಣ್ಣೀರಿಟ್ಟಿದ್ದಾರೆ. ನಾಪತ್ತೆಯಾದ ಯುವಕನ ತಾಯಿಗೆ 72 ವರ್ಷ ವಯಸ್ಸಾಗಿದ್ದು, ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಪೊಲೀಸರು ಇನ್ನೂ ಕ್ರಮಕೈಗೊಂಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ವೃದ್ಧೆಯ ಮಗನನ್ನ ಹುಡುಕಿಕೊಡುವ ಕಾರ್ಯ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.