ಶಿರಸಿ: ವಿದೇಶಿ ಒಪ್ಪಂದಗಳ ಮೇಲೆ ನಿಂತಿರೋ ಅಡಿಕೆ ಮಾರುಕಟ್ಟೆ ಮೊದಲಿಂದಲೂ ರಾಜಕೀಯ ಪ್ರಭಾವಕ್ಕೆ ಒಳಗಾಗುತ್ತಲೇ ಬಂದಿದೆ. ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಇದು ಸ್ಪಷ್ಟವಾಗಿ ಕಂಡುಬಂದಿದೆ. ಅಲ್ಲದೇ ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟವೂ ಅಡಿಕೆ ದರದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಹೌದು, ಉತ್ತರ ಕನ್ನಡದ ಶಿರಸಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಆವಕ ಒಮ್ಮೆಲೆ ಹೆಚ್ಚಳವಾಗಿದೆ. ಚುನಾವಣೆ ಘೋಷಣೆಗೂ ಮುನ್ನ ಕ್ವಿಂಟಾಲ್‍ಗೆ 28 ಸಾವಿರ ರೂ. ಇದ್ದ ಅಡಿಕೆ ದರ ಚುನಾವಣೆ ಮುಗಿಯುತ್ತಿದ್ದಂತೆ 32,000 ರೂ. ದಾಟಿದ್ದು, ಕಳೆದ ಎರಡು ತಿಂಗಳಿಂದ ಇಳಿಮುಖವಾಗಿದ್ದ ಅಡಿಕೆ ದರ ಚೇತರಿಕೆ ಕಂಡಿದೆ. ಶಿರಸಿ ಮಾರುಕಟ್ಟೆಗೆ ಪ್ರತಿದಿನ 200ಕ್ಕೂ ಹೆಚ್ಚು ಟನ್ ಅಡಿಕೆ ಆವಕ ಆಗುತ್ತಿದ್ದು, ನಿರೀಕ್ಷೆಗೂ ಮೀರಿ ಅಡಕೆ ವಹಿವಾಟು ನಡೆಯುತ್ತಿದೆ.
ಅಷ್ಟಕ್ಕೂ ಈ ದಿಢೀರ್ ಚೇತರಿಕೆಗೆ ಕಾರಣ ಚುನಾವಣೆ ಅಂತಾರೆ ಮಾರುಕಟ್ಟೆ ತಜ್ಞರು. ಸಾಮಾನ್ಯವಾಗಿ ಲೋಕಸಭಾ ಚುನಾವಣೆ ಸಮಯದಲ್ಲಿ ಅಡಿಕೆ ದರ ಏರುಪೇರಾಗುತ್ತೆ. ಸ್ಥಿರ ಸರ್ಕಾರ ಬಂದಲ್ಲಿ ಮಾರುಕಟ್ಟೆ ಚೇತರಿಕೆ ಕಾಣುತ್ತದೆ. ಚುನಾವಣೆ ಘೋಷಣೆ ಆದ ಕೂಡಲೇ ನೀತಿ ಸಂಹಿತೆ ಪರಿಣಾಮ ಹಣದ ವ್ಯವಹಾರ ಕಡಿಮೆ ಆಗುವುದರಿಂದ ದರ ಕುಸಿಯುತ್ತೆ. ಚುನಾವಣೆ ಮುಗಿಯುತ್ತಿದ್ದಂತೆ ಹವಾಲಾದಂಧೆ ಚಿಗುರುವುದರಿಂದ ದರ ಏರುತ್ತದೆ. ಈಗ ಶಿರಸಿ ಮಾರುಕಟ್ಟೆಯಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಕಂಡಿದ್ದು, ಕ್ವಿಂಟಾಲ್ ಅಡಿಕೆಗೆ 2000 ರೂ. ಏರಿಕೆ ಕಂಡಿದೆ. ಇದಲ್ಲದೇ ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟವೂ ದರ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
ಇದಲ್ಲದೇ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಎಲ್ಲ ಕಡೆ ಮದ್ಯ, ಗುಟ್ಕಾ ವಹಿವಾಟು ಹೆಚ್ಚುತ್ತದೆ. ಇದರಿಂದ ತಾತ್ಕಾಲಿಕವಾಗಿ ದರ ಏರಿಕೆ ಆಗೋದು ಸಹಜ. ಸಭೆ ಸಮಾರಂಭಗಳಲ್ಲಿ ಗುಟ್ಕಾ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗುವ ಕಾರಣ ದರ ಏರಿಕೆ ಕಂಡಿದೆ ಎನ್ನಲಾಗುತ್ತಿದೆ. ಚುನಾವಣೆ ಬಳಿಕ ಮತ್ತೆ ದರ ಕುಸಿಯಲಿದೆ ಎನ್ನುವ ಮಾತೂ ಇದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ತರ ಭಾರತದ ಅಡಿಕೆ ದಾಸ್ತಾನುದಾರರು, ಒಮ್ಮೆಲೇ ಅಧಿಕ ಪ್ರಮಾಣದಲ್ಲಿ ಅಡಿಕೆ ಖರೀದಿಸಿದ್ದಾರೆ. ಅಲ್ಲದೇ ಶಿವಮೊಗ್ಗ ಮತ್ತು ಭೀಮಸಮುದ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಶಿ ಅಡಿಕೆ ಖರೀದಿಯಾಗಿದೆ. ಮುಖ್ಯವಾಗಿ ಚುನಾವಣೆಯ ಸಲುವಾಗಿ ಗಡಿ ಮತ್ತು ಬಂದರುಗಳಲ್ಲಿ ಕಟ್ಟು ನಿಟ್ಟಿನ ನಿಗಾ ವಹಿಸಿದ್ದರಿಂದ ದೇಶಕ್ಕೆ ಅಕ್ರಮ ಅಡಿಕೆ ಬರುವುದು ಕಡಿಮೆಗೊಂಡಿದೆ. ಹೀಗಾಗಿ, ದೇಶಿ ಅಡಕೆ ಖರೀದಿಗೆ ಪಾನ್ ಮಸಾಲಾ ತಯಾರಕರು ಮುಂದಾಗಿದ್ದು, ಇದರ ಪರಿಣಾಮ ಅಡಿಕೆಗೆ ಬೇಡಿಕೆ ಬರಲಾರಂಭಿಸಿದೆ ಎನ್ನಲಾಗಿದೆ.
ಅದೇನೇ ಇರಲಿ ಚುನಾವಣೆ ಬಳಿಕವಾದ್ರೂ ಹಲವು ವರ್ಷಗಳಿಂದ ಸ್ವಲ್ಪವೂ ಏರಿಕೆ ಕಾಣದ ಅಡಿಕೆ ದರದಲ್ಲಿ ಚೇತರಿಕೆ ಕಂಡು ಬಂದಿರುವುದು ಬೆಳೆಗಾರರ ಪಾಲಿಗೆ ಸಂತೋಷದ ಸಂಗತಿಯಾಗಿದೆ.