ಕಾರವಾರ: ಬ್ರೀಟಿಷರ ಆಡಳಿತಾವಧಿಯಲ್ಲಿ ಕಾರವಾರ ನಗರವನ್ನು ಸಂಪರ್ಕಿಸಲು ನಿರ್ಮಾಣಗೊಂಡು ಕ್ರಮೇಣ ಲಂಡನ್ ಬ್ರಿಡ್ಜ್ ಎಂದೇ ಖ್ಯಾತಿ ಪಡೆದಿದ್ದ ಸೇತುವೆ 150 ವರ್ಷಗಳ ಬಳಿಕ ರಾಷ್ಟ್ರೀಯ ಹೆದ್ದಾರಿಯಾಗಿ ಅಗಲೀಕರಣಗೊಳ್ಳುತ್ತಿದ್ದು, ಈ ಮೂಲಕ ಇತಿಹಾಸದ ಪುಟ ಸೇರಲಿದೆ.
ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರನ್ನು ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲಾಗುತ್ತಿದೆ. ಈ ಕಾಮಗಾರಿಗಾಗಿ ಅದೇಷ್ಟೊ ಮನೆ, ಐತಿಹಾಸಿಕ ಕಟ್ಟಡ, ಸಾವಿರಾರು ಮರ-ಗಿಡಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಐತಿಹಾಸಿಕ ಸದಾಶಿವಗಡ ಗುಡ್ಡವನ್ನು ಸಹ ತೆರವು ಮಾಡಿ ನೆಲಸಮ ಮಾಡಲಾಗಿದೆ.
ಇದರ ಬೆನ್ನೆಲ್ಲೇ ಸುಮಾರು 150 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಲಂಡನ್ ಬ್ರಿಡ್ಜ್ ಅನ್ನು ತೆರವು ಮಾಡಲಾಗುತ್ತಿದ್ದು, ನೂರಾರು ವರ್ಷಗಳಿಂದ ಮಳೆ, ನೆರೆ ಹಾವಳಿಯ ಒತ್ತಡ, ನಗರ ವ್ಯಾಪ್ತಿಯ ಕೊಳಚೆ ನೀರಿನ ನಡುವೆ ಯಾವುದೇ ತೊಡಕಿಲ್ಲದೆ ಗಟ್ಟಿಮುಟ್ಟಾಗಿದ್ದ ಸೇತುವೆ ಇದೀಗ ಇತಿಹಾಸದ ಪುಟ ಸೇರ ತೊಡಗಿದೆ.
ಕಾರವಾರ ಬಂದರಿನ ವಹಿವಾಟು ಹೆಚ್ಚಿಸಬೇಕು ಎಂಬ ಕಾರಣಕ್ಕೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 1857 ರಿಂದ 1864 ರ ನಡುವೆ ಕಾರವಾರದ ಕೋಣೆ ಪ್ರದೇಶವನ್ನು ಅಭಿವೃದ್ಧಿ ಮಾಡಿ ಸೇತುವೆ ನಿರ್ಮಾಣ ಮಾಡಿತ್ತು. ಇದು ಕಾರವಾರ ನಗರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಸಂಪರ್ಕ ಸೇತುವೆಯಾಗಿತ್ತು.
ಸದ್ಯ ಐಆರ್ಬಿ ಕಂಪನಿಯವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಗರಕ್ಕೆ ಸಂಪರ್ಕ ಕಲ್ಪಿಸಲು ಎರಡು ಸುರಂಗ ಮಾರ್ಗವನ್ನು ಕೊರೆದು ಮೇಲ್ಸೇತುವೆಯನ್ನು ಟನಲ್ ಜೋಡಿಸಲು ಲಂಡನ್ ಬ್ರಿಡ್ಜ್ ತೆರವು ಮಾಡಿ ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಲಂಡನ್ ಬ್ರಿಡ್ಜ್ ತೆರುವ ಕಾರ್ಯಾಚರಣೆ ಆರಂಭಿಸಲಾಗಿದೆ.