ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆಯನ್ನು ನಗರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು.
ನಗರದ ಎಮ್.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಸಲು ತಯಾರಿ ನಡೆಸಲಾಗಿದ್ದು, ಬುಧವಾರ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ಡಿ. ಸ್ಟ್ರಾಂಗ್ ರೂಮ್ ಭದ್ರತೆ ಕುರಿತು ಪರಿಶೀಲನೆ ನಡೆಸಿದರು. ಶಿವರಾಮ ಹೆಬ್ಬಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್ 21 ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಮತ ಎಣಿಕೆ ನಡೆಯಲಿದೆ. ಯಲ್ಲಾಪುರದಲ್ಲಿ ಕೌಂಟಿಂಗ್‍ಗೆ ಸೂಕ್ತ ಸ್ಥಳ ಹಾಗೂ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಮತ ಎಣಿಕೆ ನಡೆಸುವುದೇ ಸೂಕ್ತ ಎಂದು ಜಿಲ್ಲಾಡಳಿತ ಮನಗಂಡಿದ್ದು, ಮಹಾವಿದ್ಯಾಲಯದ ಕೊಠಡಿಗಳನ್ನು ಪರಿಶೀಲಿಸಿದರು.
ಈ ವೇಳೆ, ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಹರೀಶಕುಮಾರ ಮಾತನಾಡಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಚುನಾವಣೆ ದಿನಾಂಕ ಸಹ ಘೋಷಣೆಯಾಗಿದ್ದು, ಮತದಾನ ವ್ಯವಸ್ಥಿತವಾಗಿ ನಡೆಸಲು ಚುನಾವಣಾ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಮತ ಎಣಿಕೆ ನಡೆಸಲು ಯಲ್ಲಾಪುರಕ್ಕಿಂತ ಶಿರಸಿಯೇ ಸೂಕ್ತ ಎಂಬ ಹಿನ್ನೆಲೆಯಲ್ಲಿ ಇಲ್ಲಿನ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದ ಕೊಠಡಿಗಳನ್ನು ಪರಿಶೀಲಿಸಲಾಗಿದೆ.
ಭದ್ರತೆ ದೃಷ್ಟಿಯಿಂದ ಈ ಸ್ಥಳ ಪೊಲೀಸ್ ಇಲಾಖೆಗೆ ಸೂಕ್ತ ಎನಿಸಿದರೆ ಚುನಾವಣಾ ಆಯೋಗಕ್ಕೆ ಕಳುಹಿಸಿ ಮತ ಎಣಿಕೆ ಕೇಂದ್ರ ಅಂತಿಮಗೊಳಿಸಲಾಗುವುದು ಎಂದರು.