ಕಾರವಾರ: ಯಾವುದೇ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕು ಅಂದ್ರೆ ಉತ್ತಮ ವಾತಾವರಣ, ಕನಿಷ್ಠ ಮೂಲಭೂತ ಸೌಕರ್ಯಗಳು ಬೇಕೇ ಬೇಕು. ಆದರೆ ಉತ್ತರಕನ್ನಡ ಜಿಲ್ಲೆಯ ಮಕ್ಕಳ ಪಾಲಿಗೆ ಕನಿಷ್ಠ ಸೌಲಭ್ಯವೂ ಗಗನ ಕುಸುಮವಾಗಿದೆ. ಇಲ್ಲಿನ ಮಣ್ಣಿನ ಗೋಡೆ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳು ನಿತ್ಯ ಭಯದಲ್ಲಿಯೇ ಪಾಠ ಕೇಳುವಂತಾಗಿದೆ.
ಸರ್ಕಾರಿ ಶಾಲೆಗಳನ್ನ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಹಿಂದಿನಿಂದಲೂ ಕೋಟ್ಯಂತರ ರೂಪಾಯಿ ಹಣ ವಿನಿಯೋಗ ಮಾಡುತ್ತಲೇ ಇವೆ. ಅಲ್ಲದೇ ಬಹುತೇಕ ಕಡೆ ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಿ ಆ ಮೂಲಕ ಶಿಕ್ಷಣದಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗುತ್ತಿದೆ. ಆದರೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡದಲ್ಲಿ ಮಾತ್ರ ಮಣ್ಣಿನ ಗೋಡೆ ಶಾಲೆಗಳು ಇಲ್ಲಿನ ವಿದ್ಯಾರ್ಥಿಗಳ ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಸುಮಾರು 318 ಶಾಲೆಗಳು ಮಣ್ಣಿನ ಗೋಡೆಯಿಂದಲೇ ಮಾಡಿದ್ದಾಗಿದೆ. ಅದರಲ್ಲೂ ಕರಾವಳಿಯಲ್ಲಿ ಸುಮಾರು 181 ಶಾಲೆಗಳು ಮಣ್ಣಿನ ಗೋಡೆಯಿಂದ ಮಾಡಿದ್ದು, ಯಾವಾಗ ಗೋಡೆ ಕುಸಿದು ಬೀಳುತ್ತದೆಯೋ ಅನ್ನೋ ಭಯದಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಪಾಠ ಕಲಿಯುತ್ತಾ ಕಳೆಯಬೇಕಾಗಿದೆ.
ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತದೆ. ಮಳೆಯಿಂದ ಮಣ್ಣಿನ ಗೋಡೆ ಶಾಲೆಗಳನ್ನು ತೆಗೆದು ಹೊಸ ಕಟ್ಟಡ ಕಟ್ಟುವಂತೆ ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಾ ಬಂದರೂ ಯಾರೂ ಸ್ಪಂದಿಸಿಲ್ಲ.
ಈ ಹಿಂದೆ ಜಿಲ್ಲೆಯ ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಶಿಕ್ಷಣ ಸಚಿವರಾಗಿದ್ದರು, ಅಲ್ಲದೇ ರಾಜ್ಯದ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಸಹ ಇದೇ ಜಿಲ್ಲೆಯವರು. ಆದರೂ ಕೂಡ ಮಣ್ಣಿನ ಗೋಡೆ ಶಾಲೆಯನ್ನ ತೆಗೆದು ಹೊಸ ಕಟ್ಟಡ ಕಟ್ಟುವಲ್ಲಿ ಯಾರು ಆಸಕ್ತಿಯನ್ನು ತೋರಿಸಿಲ್ಲ. ಅಪಾಯ ಆಗುವ ಮೊದಲೇ ಇಲಾಖೆ ಎಚ್ಚೆತ್ತುಕೊಳ್ಳಲಿ ಎನ್ನುತ್ತಾರೆ ಸ್ಥಳೀಯರಾದ ಷಣ್ಮುಖ ಗೌಡ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಹಾಗೂ ಶಿರಸಿ ಎಂಬ ಎರಡು ಶೈಕ್ಷಣಿಕ ಜಿಲ್ಲೆಗಳಿವೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 181 ಮಣ್ಣಿನ ಗೋಡೆ ಶಾಲೆಗಳಿದ್ದರೆ, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 137 ಶಾಲೆಗಳಿವೆ. ಇನ್ನು ಹಲವು ಬಾರಿ ಮಣ್ಣಿನ ಗೋಡೆಗಳು ಕುಸಿದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಸುದೈವವಶಾತ್ ಈವರೆಗೆ ಯಾವುದೇ ಅಪಾಯ ಆಗಿಲ್ಲ. ಇನ್ನು ಮಣ್ಣಿನ ಗೋಡೆಗಳ ಶಾಲೆ ಇರುವ ಕಡೆ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಗಡಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಇದರ ನಡುವೆಯೇ ಮಣ್ಣಿನ ಗೋಡೆ ಶಾಲೆಗಳನ್ನ ತೆಗೆಯುವಲ್ಲಿ ಸರ್ಕಾರ ವಿಫಲವಾಗಿರುವುದು ಇನ್ನಷ್ಟು ಸರ್ಕಾರಿ ಶಾಲೆ ಮುಚ್ಚಲು ಸಹಾಯವಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ರೆ, ಈಗಾಗಲೇ ಸರ್ಕಾರಕ್ಕೆ ಮಣ್ಣಿನ ಗೋಡೆ ಇರುವ ಶಾಲೆಗಳ ರಿಪೇರಿ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಸುಮಾರು, 18 ಕೋಟಿ ಹಣದ ಅಗತ್ಯತೆ ಬಗ್ಗೆ ಸಹ ತಿಳಿಸಿದ್ದು, ಆದಷ್ಟು ಶೀಘ್ರದಲ್ಲಿ ಮಣ್ಣಿನ ಗೋಡೆ ಇರುವ ಶಾಲೆಗಳನ್ನು ತೆಗೆದು ಹೊಸ ಕಟ್ಟಡ ನಿರ್ಮಿಸುತ್ತೇವೆ ಎನ್ನುತ್ತಾರೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಮಂಜುನಾಥ.
ಜಿಲ್ಲೆಯಲ್ಲಿ ಈ ಹಿಂದೆ ನಿರ್ಮಿಸಲಾದ ಬಹುತೇಕ ಮಣ್ಣಿನ ಗೋಡೆ ಕಟ್ಟಡಗಳು ಅಂತಿಮ ದಿನಗಳನ್ನು ಎಣಿಸುತ್ತಿವೆ. ಅಲ್ಲದೆ ಇವುಗಳು ಹೆಂಚಿನ ಹೊದಿಕೆ ಹೊಂದಿದ್ದು, ಮಳೆಗಾಲದಲ್ಲಿ ಅಕಸ್ಮಾತ್ ಗೋಡೆಗಳ ಮೇಲೆ ನೀರು ಬಿದ್ದಲ್ಲಿ ಗೋಡೆ ಕುಸಿಯುವ ಆತಂಕ ಇದೆ. ಸರ್ಕಾರ ಕೂಡಲೇ ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಹಣ ಒದಗಿಸಿ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಅಲ್ಲದೇ ಮಕ್ಕಳಲ್ಲಿ ಭಯವನ್ನು ಹೋಗಲಾಡಿಸಿ ಉತ್ತಮ ಕಲಿಕೆಯ ವಾತಾವರಣ ನಿರ್ಮಿಸಿಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.