ಭಟ್ಕಳ (ಉ.ಕ): ಭಟ್ಕಳ ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನಿಂದಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಂಝೀಮ್ ಸಂಸ್ಥೆಯ ಮುಖಂಡ ಡಾ.ಎಂ.ಎಂ.ಹನೀಫ್ ಶಬಾಬ್ ಹೇಳಿದರು.
ತಂಝಿಮ್ ಕಾರ್ಯಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾವೀಗ ಕೊರೊನಾದ 3ನೇ ಹಂತಕ್ಕೆ ಕಾಲಿಟ್ಟಿದ್ದೇವೆ. ಮೊದಲ ಹಾಗೂ ಎರಡನೇ ಹಂತವನ್ನು ನಾವು ಅತ್ಯಂತ ಯಶಸ್ವಿಯಾಗಿ ನಿಯಂತ್ರಿಸಿದ್ದೇವೆ. ಈಗ 3ನೇ ಹಂತದಲ್ಲಿ ಲಾಕ್ಡೌನ್ ತೆರವುಗೊಂಡಿದ್ದು, ಒಬ್ಬರು ಇನ್ನೊಬ್ಬರ ಸಂಪರ್ಕದಿಂದಾಗಿ ಪ್ರಕರಣಗಳು ಹೆಚ್ಚಾಗಿವೆ ಎಂದರು.
ಇದಕ್ಕಾಗಿ ಲಾಕ್ಡೌನ್ ಮಾತ್ರ ಪರಿಹಾರವಲ್ಲ. ನಾವು ನಮ್ಮನ್ನು ತಡೆಹಿಡಿದುಕೊಳ್ಳುವುದರ ಮೂಲಕ ಇದನ್ನು ನಿಯಂತ್ರಿಸಬಹುದು. ಎಲ್ಲ ರೋಗಗಳಂತೆ ಕೊರೊನಾ ಸೋಂಕಿನೊಂದಿಗೆ ನಾವು ಬದುಕುವುದನ್ನು ಕಲಿತುಕೊಳ್ಳಬೇಕಾಗಿದೆ. ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಓಡಾಡುತ್ತಿದ್ದಾರೆ ಮೊದಲು ಇದರ ಮೇಲೆ ನಿಯಂತ್ರಣ ಸಾಧಿಸಬೇಕಾಗಿದೆ ಎಂದರು.
ಬಳಿಕ ತಂಝೀಮ್ ಸಂಸ್ಥೆಯ ಇನ್ನೋರ್ವ ಮುಖಂಡ ನ್ಯಾಯಾವಾದಿ ಸೈಯ್ಯದ್ ಇಮ್ರಾನ್ ಲಂಕಾ ಮಾತನಾಡಿ, ಮಾರ್ಚ್ ತಿಂಗಳಲ್ಲಿ ನಮ್ಮಲ್ಲಿ 9 ಪ್ರಕರಣ ದಾಖಲಾಗಿತ್ತು. ಎಪ್ರಿಲ್ ಮೊದಲ ವಾರದಲ್ಲಿ 40 ಪ್ರಕರಣಗಳು, ಜುಲೈ ಮೊದಲ ವಾರದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗುವುದರ ಮೂಲಕ ನಾವೀಗ ತೃತೀಯ ಹಂತವನ್ನು ತಲುಪಿದಂತಾಗಿದೆ.
ಈ ನಿಟ್ಟಿನಲ್ಲಿ ತಂಝೀಮ್ ಸಂಸ್ಥೆಯು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದೊಂದಿಗೆ ಜನರಲ್ಲಿ ಸಂಪೂರ್ಣ ಜಾಗೃತಿಯನ್ನು ಮೂಡಿಸುವಲ್ಲಿ ಸಕ್ರಿಯವಾಗಿದೆ. ಸಾರ್ವಜನಿಕರ ಹಾಗೂ ಆಡಳಿತದ ಬೆಂಬಲದೊಂದಿಗೆ ನಾವು 2ನೇ ಹಂತದ ಕೊರೊನಾ ಗೆದ್ದಿದ್ದೇವೆ ಎಂದರು.