ಭಟ್ಕಳ: ಎರಡು ವರ್ಷಗಳ ಹಿಂದೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿನ 7 ಮಂದಿ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರಧನ ನೀಡಬೇಕೆಂದು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದು, ಶನಿವಾರ ವಿಧಾನಸೌಧದಲ್ಲಿ ಮೀನುಗಾರರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಿದ್ದಾರೆ.
ಎರಡು ವರ್ಷದ ಹಿಂದೆ ಡಿಸೆಂಬರ್ 16ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ 7 ಮಂದಿ ಮೀನುಗಾರರು ಆಕಸ್ಮಿಕವಾಗಿ ಕಣ್ಮರೆಯಾಗಿದ್ದರು. ಆ ಮೀನುಗಾರರೇ ಅವರ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಆದರೆ ಅವರ ಪತ್ತೆ ಇನ್ನೂ ಆಗದ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ಜೀವನ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಹಿಂದೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಅವರೊಂದಿಗೆ ಮತ್ತು ಕುಮಟ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಜೊತೆಗೆ ಭಟ್ಕಳ ಶಾಸಕ ಸುನೀಲ ನಾಯ್ಕ ಅವರ ನಿಯೋಗದ ತಂಡವೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ "ಸುವರ್ಣ ತ್ರಿಭುಜ" ಬೋಟ್ ಮುಳುಗಡೆಯಾಗಿ ಕಣ್ಮರೆಯಾದ 7 ಜನ ಮೀನುಗಾರರ ಕುಟುಂಬಗಳಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ತಲಾ ರೂ. 10 ಲಕ್ಷ ಪರಿಹಾರ ಘೋಷಣೆ ಮಾಡುವಂತೆ ಮನವಿ ಮಾಡಲಾಗಿತ್ತು.
ಅದರಂತೆ ರಾಜ್ಯ ಸರ್ಕಾರಕ್ಕೆ ಸಚಿವರು ಸಹಿತ ಉಡುಪಿ, ಕುಮಟಾ, ಭಟ್ಕಳ ಶಾಸಕರು ಒತ್ತಾಯ ಮಾಡುತ್ತಾ ಬಂದ ಹಿನ್ನೆಲೆ ಕುಟುಂಬಗಳಿಗೆ ಸದ್ಯ ಸರ್ಕಾರದಿಂದ ಪರಿಹಾರ ಸಿಗುವಂತಾಗಿದೆ. ಮೀನುಗಾರಿಕಾ ಸಚಿವರ, ಉಡುಪಿ, ಕುಮಟಾ ಹಾಗೂ ಪ್ರಮುಖವಾಗಿ ಭಟ್ಕಳ ಶಾಸಕರ ಪಾತ್ರ ಮೆಚ್ಚುವಂತಹದ್ದಾಗಿದೆ.
ಸದ್ಯ ಸಚಿವರು, ಶಾಸಕರುಗಳ ನಿಯೋಗದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತ್ರಸ್ತ ಕುಟುಂಬಗಳಿಗೆ ನಾಳೆ ವಿಧಾನಸೌಧದಲ್ಲಿ ತಲಾ 10 ಲಕ್ಷ ರೂಪಾಯಿಯ ಚೆಕ್ ಹಸ್ತಾಂತರಿಸಲಿದ್ದಾರೆ. ಈ ಹಿನ್ನೆಲೆ ಗುರುವಾರ ಈ ಬಗ್ಗೆ 7 ಕುಟುಂಬಗಳಿಗೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಸವಿವರವಾಗಿ ಮಾಹಿತಿ ನೀಡಿದ್ದು, ಬೆಂಗಳೂರಿಗೆ ಕುಟುಂಬಸ್ಥರು ತೆರಳಲಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರವನ್ನು ಸಂತ್ರಸ್ತ ಕುಟುಂಬಗಳಿಗೆ ನೀಡಲಾಗಿತ್ತು.