ಕಾರವಾರ(ಉತ್ತರಕನ್ನಡ): ಪ್ರಸಕ್ತ ವರ್ಷದ ಮೊದಲ ಸೂರ್ಯಗ್ರಹಣ ಇಂದು ಗೋಚರಿಸಿತು. ಕಾರವಾರದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಕಾರವಾರದ ಜಿಲ್ಲಾ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸನ್ ಟೆಲಿಸ್ಕೋಪ್, ಪಿನ್ಹೋಲ್ ಕ್ಯಾಮರಾ ಹಾಗೂ ಸನ್ ಸ್ಪೆಕ್ಟ್ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಪರೂಪದ ಗ್ರಹಣ ವೀಕ್ಷಿಸಿದ್ರು. ಪ್ರತಿ 10 ನಿಮಿಷಕ್ಕೊಮ್ಮೆ ಸೂರ್ಯಗ್ರಹಣದ ಚಿತ್ರಣದ ಮ್ಯಾಪ್ ತೆಗೆದ ವಿದ್ಯಾರ್ಥಿಗಳು, ಅದನ್ನು ದಾಖಲಿಸುವ ಪ್ರಯತ್ನ ನಡೆಸಿದರು.
ಈ ಕುರಿತು ಮಾತನಾಡಿದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಪವನ ದೇಶಪಾಂಡೆ ಅವರು, ಸೂರ್ಯಗ್ರಹಣ ವೀಕ್ಷಣೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಹಣ ಮಧ್ಯಾಹ್ನ 1.24 ರವರೆಗೆ ಗೋಚರಿಸಿದ್ದು, ಬರಿಗಣ್ಣಿನಿಂದ ನೋಡುವುದು ಅಪಾಯಕಾರಿಯಾಗಿದೆ. ಈ ಕಾರಣದಿಂದಲೇ ವಿಜ್ಞಾನ ಕೇಂದ್ರದಲ್ಲಿ ಸನ್ ಟೆಲಿಸ್ಕೋಪ್, ಪಿನ್ ಹೋಲ್ ಕ್ಯಾಮರಾ ಹಾಗೂ ಸನ್ ಸ್ಪೆಕ್ಟ್ ಮೂಲಕ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.