ಕಾರವಾರ: ಹೆಬ್ಬಾವು ಕಚ್ಚಿ ಗಾಯಗೊಂಡಿದ್ದ ವ್ಯಕ್ತಿಯೋರ್ವ ಹಾವಿನೊಂದಿಗೆ ಆಸ್ಪತ್ರೆಗೆ ಬಂದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.
ತಾಲೂಕಿನ ಪುರವರ್ಗದ ವೆಂಕಟರಮಣ ನಾಯ್ಕ ಇಂತದ್ದೊಂದು ಸಾಹಸ ಮಾಡಿದ್ದು, ಪ್ರಾಣಾಪಯಾದಿಂದ ಪಾರಾಗಿದ್ದಾರೆ.
ಏನಿದು ಘಟನೆ:
ತಾಲೂಕಿನಾದ್ಯಂತ ನಿನ್ನೆ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ ತುಂಬಿರುವ ಪರಿಣಾಮ ಚೌಥನಿ ಹೊಳೆ ತುಂಬಿ ಹರಿಯುತ್ತಿತ್ತು. ಇದೇ ವೇಳೆ ಹೊಳೆಯಲ್ಲಿ ತೇಲಿ ಬಂದ ಹೆಬ್ಬಾವೊಂದನ್ನು ರಕ್ಷಣೆ ಮಾಡಲು ವೆಂಕಟರಮಣ ಸೇರಿದಂತೆ ಆತನ ಸ್ನೇಹಿತರು ಮುಂದಾಗಿದ್ದರು. ಈ ವೇಳೆ ಹಾವು ವೆಂಕಟರಮಣ ಕೈ ಕಚ್ಚಿ ಗಾಯಗೊಳಿಸಿದೆ.
ಇದರಿಂದ ವಿಚಲಿತಗೊಂಡ ಅವರು, ಆರೇಳು ಅಡಿ ಉದ್ದದ ಹೆಬ್ಬಾವನ್ನು ಸ್ನೇಹಿತರೊಂದಿಗೆ ಹಿಡಿದುಕೊಂಡೇ ಆಸ್ಪತ್ರೆಗೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾವನ್ನು ಹಿಡಿದುಕೊಂಡು, ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು. ವೆಂಕಟರಮಣ ಅವರಿಗೆ ಭಟ್ಕಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.