ಕಾರವಾರ: ಕರಾವಳಿ ನಗರಿ ಕಾರವಾರದಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ನಗರದ ಅಲ್ಲಲ್ಲಿ ಗುಂಪು ಗುಂಪಾಗಿ ತಿರುಗುವ ಬೀದಿ ನಾಯಿಗಳು ದಾರಿ ಹೋಕರ ಮೇಲೆ ಎರಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಒಂದೇ ವರ್ಷದಲ್ಲಿ ಬರೋಬ್ಬರಿ ಆರು ಸಾವಿರಕ್ಕೂ ಅಧಿಕ ಮಂದಿಗೆ ಬೀದಿ ನಾಯಿಗಳು ಕಚ್ಚಿವೆ.
ಈ ನಿಟ್ಟಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದ್ದು, ಜೊತೆಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಕಾರವಾರದಲ್ಲಿ ಸದ್ಯ ಜನರು ರಸ್ತೆಯಲ್ಲಿ ಓಡಾಡುವುದಕ್ಕೆ ಆತಂಕ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಅಲ್ಲಲ್ಲಿ ಗುಂಪು ಗುಂಪಾಗಿ ಕಂಡು ಬರುವ ಬೀದಿ ನಾಯಿಗಳು ಯಾವಾಗ ಮೈಮೇಲೆ ಎರಗುತ್ತವೆಯೋ ಅನ್ನೋ ಆತಂಕದಲ್ಲೇ ಜನರು ತಿರುಗಾಡುವಂತಾಗಿದ್ದು, ಶಾಲಾ ಮಕ್ಕಳಂತೂ ಭಯದಲ್ಲೇ ಓಡಾಡಬೇಕಿದೆ. ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 6,500ಕ್ಕೂ ಅಧಿಕ ಮಂದಿಗೆ ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿ ಕಚ್ಚಿರುವ ಪ್ರಕರಣಗಳು ವರದಿಯಾಗಿವೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲಾಡಳಿತದಿಂದ ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಪಶುವೈದ್ಯಕೀಯ ಇಲಾಖೆಯೊಂದಿಗೆ ಜಂಟಿ ಸಭೆಯನ್ನ ನಡೆಸಲಾಗಿದ್ದು, ನಾಯಿ ಕಡಿತಕ್ಕೊಳಗಾದವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಅಧಿಕಾರಿಗಳು ಮತ್ತು ವೈದ್ಯರಿಗೆ ಸೂಚಿಸಲಾಗಿದೆ.
ಅಲ್ಲದೇ ಆರೋಗ್ಯ ಇಲಾಖೆಯಿಂದ ರೇಬಿಸ್ ವ್ಯಾಕ್ಸಿನ್‌ಗಳನ್ನ ಸಂಗ್ರಹಿಸಿಡಲಾಗಿದ್ದು, ಮುಂಜಾಗ್ರತವಾಗಿ ಡೋಸ್‌ಗಳನ್ನ ಸಹ ಅಗತ್ಯ ಇರುವ ಕಡೆ ಪೂರೈಕೆ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪ್ರಮುಖವಾಗಿ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಕೈಗೊಳ್ಳಲು ಸೂಚಿಸಲಾಗಿದ್ದು, ಪ್ರಾಣಿದಯಾ ಸಂಘಗಳ ಸಹಕಾರದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್ ಮಾಹಿತಿ ನೀಡಿದ್ದಾರೆ.
ಇನ್ನು ಬೀದಿ ನಾಯಿಗಳ ನಿಯಂತ್ರಣದ ಜೊತೆಗೆ ಶಾಲೆಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬೀದಿ ನಾಯಿಗಳಿಂದ ಯಾವ ರೀತಿ ಸುರಕ್ಷತೆ ಕಾಯ್ದುಕೊಳ್ಳಬೇಕು ಎನ್ನುವ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮಿಷನ್ ರೇಬಿಸ್ ಎನ್ನುವ ಖಾಸಗಿ ಸಂಸ್ಥೆ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದ್ದು, ಇದರೊಂದಿಗೆ ಬೀದಿ ನಾಯಿಗಳ ಸಂತತಿಯನ್ನ ಸಹ ಕಡಿತಗೊಳಿಸಲು ಪ್ರಯತ್ನಿಸಲಾಗುತ್ತಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬೀದಿ ನಾಯಿಗಳ ನಿಯಂತ್ರಣದ ಹೆಸರಿನಲ್ಲಿ ಮೂಕ ಪ್ರಾಣಿಗಳನ್ನ ಶೋಷಿಸಲಾಗುತ್ತಿದ್ದು, ಕೆಲ ದಿನಗಳ ಹಿಂದೆ ಹಳಿಯಾಳದಲ್ಲಿ ಬೀದಿ ನಾಯಿಗಳನ್ನ ಹಿಡಿದು ಅರಣ್ಯಕ್ಕೆ ಬಿಡಲಾಗಿತ್ತು. ಇದು ಒಂದೆಡೆ ಬೀದಿ ನಾಯಿಗಳ ಅಪಾಯಕ್ಕೆ ಎಡೆ ಮಾಡಿಕೊಡುತ್ತಿರುವುದರ ಜೊತೆಗೆ ಕಾಡು ಪ್ರಾಣಿಗಳಿಗೂ ಸಹ ಬೀದಿನಾಯಿಗಳಿಂದ ರೋಗ ಹರಡುವ ಆತಂಕ ಇದೆ. ಹೀಗಾಗಿ ಸರಿಯಾದ ಕ್ರಮ ಅನುಸರಿಸಿ ಬೀದಿ ನಾಯಿಗಳನ್ನ ನಿಯಂತ್ರಿಸಬೇಕು ಅನ್ನೋದು ಪ್ರಾಣಿ ಪ್ರೇಮಿಗಳ ಅಭಿಪ್ರಾಯ.
ಇದನ್ನೂ ಓದಿ: ಬೀದಿ ನಾಯಿಗಳ ದಾಳಿ: ಮೂರು ವರ್ಷದ ಬಾಲಕ ಸಾವು