ಶಿರಸಿ: ಪ್ರವಾಹ ಹಾನಿ ಕುರಿತಂತೆ ವಿಧಾನ ಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕುವ ಕೆಲಸ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಉತ್ತರ ಕನ್ನಡ ಜಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸರ್ಕಾರದ ಗಮನ ಸೆಳೆಯೋ ಕೆಲಸ ಮಾಡುವುದಾಗಿ ತಿಳಿಸಿದರು.
ಸ್ಥಳೀಯರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ವಿಧಾನಸಭೆಯಲ್ಲಿ ಎರಡು ಬಾರಿ ಚಾಟಿ ಬೀಸುವ ಕೆಲಸ ಮಾಡಿದ್ದೇನೆ. ಆದರೆ, ಇದು ದಪ್ಪ ಚರ್ಮದ ಸರ್ಕಾರ ನಾನು ಎಷ್ಟೇ ಹೇಳಿದರೂ ಕೇಳಿಸುತ್ತಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹಾನಿಯ ಲೆಕ್ಕ ಹಾಕಬೇಕು. ಈ ಸಂದರ್ಭದಲ್ಲಿ ಸ್ವಲ್ಪ ಲಿಬರಲ್ ಆಗಿರಬೇಕು. ನೀವೇನು ಕೈಯಿಂದ ಹಣ ನೀಡುವುದಿಲ್ಲ. ಮಾನವೀಯತೆಯಿಂದ ಹೆಚ್ಚಿನ ಸಹಾಯ ದೊರಕುವಂತೆ ನೋಡಿಕೊಳ್ಳಬೇಕು ಎಂದರು.
ಈ ಭಾಗದ ಸಾಕಷ್ಟು ಅಡಕೆ, ಬಾಳೆ, ಭತ್ತದ ಗದ್ದೆಗಳಿಗೆ ಹಾನಿಯಾಗಿದೆ. ಅಧಿಕಾರಿಗಳು ಸರಿಯಾಗಿ ನಷ್ಟದ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಯಲ್ಲಾಪುರ ತಾಲೂಕಿನ ಗುಳ್ಳಾಪುರ ಹಾಗೂ ಅಂಕೋಲಾ ತಾಲೂಕಿನಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಅವರು ಭೇಟಿ ನೀಡಿದರು. ಶಾಸಕ ಆರ್.ವಿ. ದೇಶಪಾಂಡೆ ಇದ್ದರು.