ಶಿರಸಿ: ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯ ಭಾಗವಾಗಿ ಭಾರತ ಮಾಲಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಶಿರಸಿ - ಕುಮಟಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಗೆ ಪರಿಸರವಾದಿಗಳು ತೀವ್ರವಾಗಿ ಅಡ್ಡಗಾಲಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ಜನತೆ ಪರಿಸರವಾದಿಗಳ ವಿರುದ್ಧ ಫೆ. 27ರಂದು ರಸ್ತೆ ತಡೆದು ಪ್ರತಿಭಟಿಸಲು ಸಜ್ಜಾಗುತ್ತಿದ್ದಾರೆ.
ಆರಂಭದಿಂದಲೂ ಒಂದೊಂದೇ ವಿಘ್ನ ಕಾಣುತ್ತಿರುವ ಶಿರಸಿ - ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಎಲ್ಲವನ್ನೂ ಮೀರಿ ಕಳೆದ 10 ದಿನಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಅರಣ್ಯ ಇಲಾಖೆಯವರು ಮರಗಳನ್ನು ಕಡಿಯುವ ಕೆಲಸದಲ್ಲಿ ನಿರತರಾಗಿದ್ದರು. ಸುಮಾರು 9 ಸಾವಿರ ಮರಗಳನ್ನು ಗುರುತಿಸಲಾಗಿತ್ತು. ಆದರೆ ಬೆಂಗಳೂರು ಮೂಲದ ಎನ್ಜಿಒ ಒಂದು ಪರಿಸರದ ನೆಪ ಇಟ್ಟುಕೊಂಡು ಕಾಮಗಾರಿ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು, ಅದನ್ನೇ ನೆಪ ಮಾಡಿಕೊಂಡು ಅರಣ್ಯ ಇಲಾಖೆ ಮರಗಳನ್ನು ಕಡಿಯುವುದನ್ನು ನಿಲ್ಲಿಸಿದೆ.
ಇದರಿಂದ ಶಿರಸಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಪರ ಜನರು ರೊಚ್ಚಿಗೆದ್ದಿದ್ದು, ಫೆ. 27ರಂದು ಶಿರಸಿ ತಾಲೂಕಿನ ಅಮ್ಮೀನಳ್ಳಿಯಲ್ಲಿ ರಸ್ತೆ ತಡೆದು ಪರಿಸರವಾದಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲು ತಯಾರಿ ನಡೆಸಲಾಗಿದೆ.
ಈ ಹಿಂದೆಯೂ ಎರಡು ಮೂರು ಬಾರಿ ರಸ್ತೆ ಕಾಮಗಾರಿ ನಡೆಸದಂತೆ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನಂತರ ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಈಗ ಮತ್ತೆ ಅಭಿವೃದ್ಧಿಗೆ ಪರಿಸರದ ಹೆಸರಿನಲ್ಲಿ ತೊಡಕು ಉಂಟು ಮಾಡುತ್ತಿರುವ ಪರಿಸರವಾದಿಗಳನ್ನು ಪರಿಸರ ವ್ಯಾಧಿಗಳು ಎಂದು ಜನಪ್ರತಿನಿಧಿಗಳು ಟೀಕಿಸಿದ್ದಾರೆ.