ಕಾರವಾರ: ಮಳೆಯಿಲ್ಲದೇ ಕಂಗೆಟ್ಟಿದ್ದ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಸುರಿದ ಮಳೆನೀರು ಸರಾಗವಾಗಿ ಹರಿದು ಹೋಗುಲು ನೌಕಾನೆಲೆಯಿಂದ ನಡೆಸಿದ ಕಾಮಗಾರಿ ಮುಳುವಾಗಿದೆ. ಮೊದಲ ಮಳೆ ಕಾರವಾರ ತಾಲೂಕಿನ ಚೆಂಡೀಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡೂರು ಗ್ರಾಮಸ್ಥರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.
ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ನೀರು ತುಂಬಿಕೊಂಡಿದೆ. ಜಮೀನುಗಳ ಮಧ್ಯೆ ಇರುವ ಮನೆಗಳು ದ್ವೀಪದಂತಾಗಿವೆ. ಮಳೆ ಹೀಗೇ ಮುಂದುವರಿದಲ್ಲಿ ಮನೆಗಳೂ ಮುಳುಗಡೆಯಾಗುವ ಆತಂಕ ಸ್ಥಳೀಯರದ್ದು.
'ತಡೆಗೋಡೆ ನಿರ್ಮಾಣದಿಂದ ಕೃಷಿ ಭೂಮಿ, ಮನೆ ಜಲಾವೃತ': ನೌಕಾನೆಲೆಯ ಕಾಮಗಾರಿಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸಮುದ್ರಕ್ಕೆ ಹರಿಯುವ ನೀರಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿದ್ದೇ ಗ್ರಾಮದ ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ನೀರು ತುಂಬಿಕೊಂಡಿದೆ. ಜಮೀನುಗಳ ಮಧ್ಯೆ ಮನೆಗಳನ್ನು ಕಟ್ಟಿಕೊಂಡವರು ಮೊಣಕಾಲವರೆಗಿನ ನೀರಿನಲ್ಲಿ ಓಡಾಡುವ ಸ್ಥಿತಿ ಇದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಪಾಳುಬಿದ್ದ ನೂರಾರು ಎಕರೆ ಕೃಷಿ ಭೂಮಿ : ಗ್ರಾಮದಲ್ಲಿ 15ಕ್ಕೂ ಹೆಚ್ಚು ಮನೆಗಳಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಸಮಸ್ಯೆ ಇತ್ತಾದರೂ ಈ ಬಾರಿ ಮೊದಲ ಮಳೆಗೆ ಸಮಸ್ಯೆ ಗಂಭೀರವಾಗಿದೆ. ಇದರಿಂದ ನೂರಾರು ಎಕರೆ ಕೃಷಿ ಭೂಮಿ ಪಾಳು ಬಿಡುವಂತಾಗಿದೆ. 2008ರಲ್ಲಿ ಇದೇ ರೀತಿ ನೀರು ತುಂಬಿಕೊಂಡು ಮನೆಗಳನ್ನು ಕಳೆದುಕೊಂಡಿದ್ದ ಜನರು ಇದೀಗ ಮರಳಿ ಸಹಜ ಜೀವನ ನಡೆಸುತ್ತಿರುವಾಗ ಮತ್ತೆ ಮನೆಗಳು ಕುಸಿಯುವ ಆತಂಕವಿದೆ.
ಇದೇ ಕಾರಣಕ್ಕೆ ಮನೆ ಮಕ್ಕಳನ್ನು ಸಂಬಂಧಿಕರ ಮನೆಗಳಿಗೆ ಕಳುಹಿಸಲಾಗಿದೆ. ಒಂದೊಮ್ಮೆ ನೀರು ತುಂಬಿಕೊಂಡಲ್ಲಿ ಗ್ರಾಮದಿಂದ ತೆರಳಲು ಅನುಕೂಲವಾಗುವಂತೆ ದೋಣಿ ಇವೆಯಾದರೂ ಅದೂ ಕೂಡ ಒಡೆದುಹೋಗಿದೆ. ಅಧಿಕಾರಿಗಳನ್ನು ಕೇಳಿದ್ರೆ ಯಾರೂ ಸ್ಪಂದನೆ ನೀಡುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಧಿಕಾರಿಗಳನ್ನು ಕೇಳಿದ್ರೆ, ನೌಕಾನೆಲೆಯಿಂದ ಹರಿಯುವ ಹಳ್ಳಕ್ಕೆ ಮಣ್ಣು ತುಂಬಿ ರಸ್ತೆ ನಿರ್ಮಿಸಿದ್ದರಿಂದ ಸಮಸ್ಯೆಯಾಗಿತ್ತು. ಆದರೀಗ ನೌಕಾನೆಲೆಯವರು ಮಣ್ಣು ತೆರವುಗೊಳಿಸುತ್ತಿರುವ ಮಾಹಿತಿ ಇದೆ. ಮಳೆ ನೀರಿನಿಂದ ತುಂಬಿಕೊಂಡಿದ್ದ ಗ್ರಾಮಕ್ಕೆ ಸ್ಥಳೀಯ ಪಂಚಾಯಿತಿ ಅಧ್ಯಕ್ಷರ ಜೊತೆ ಭೇಟಿ ನೀಡಿ ಸ್ಥಳೀಯರಿಂದ ಸಮಸ್ಯೆ ಆಲಿಸಿದ್ದೇವೆ. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು. ಮಳೆ ನೀರು ಮತ್ತೆ ಹೆಚ್ಚಾದಲ್ಲಿ ಮಾಹಿತಿ ನೀಡಲು ಕೂಡ ಸೂಚಿಸಿದ್ದು ಕಾಳಜಿ ಕೇಂದ್ರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಚೆಂಡಿಯಾ ಗ್ರಾಮ ಪಂಚಾಯಿತಿ ಪಿಡಿಒ ನಾಗೇಶ ತೆಂಡೂಲ್ಕರ್ ತಿಳಿಸಿದ್ದಾರೆ.
ಒಟ್ಟಾರೆ ಮಳೆ ನೀರು ಹರಿದುಹೋಗುವ ಪ್ರದೇಶದಲ್ಲಿ ನೌಕಾನೆಲೆಯಿಂದ ಕಾಮಗಾರಿ ನಡೆಸಿದ ಕಾರಣ ಜನ ಪರದಾಡುವಂತಾಗಿದೆ. ಮಳೆಗಾಲ ಈಗ ತಾನೇ ಆರಂಭಗೊಂಡಿರುವ ಕಾರಣ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಬೇಕಿದೆ.
ಇದನ್ನೂಓದಿ: ರಾಜ್ಯದಲ್ಲಿ ಮುಂಗಾರು ದುರ್ಬಲ: ಕೆಲವು ಜಿಲ್ಲೆಗಳಲ್ಲಿ ಹಾವು-ಏಣಿಯಾಟ