ಭಟ್ಕಳ: ದೇವರು ವರ ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತೆ ಕುಡಿಯುವ ನೀರಿಗಾಗಿ ಸರ್ಕಾರ ಸಾಕಷ್ಟು ಸವಲತ್ತು ಒದಗಿಸಿದ್ದರೂ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಮುದ್ರದ ನೀರು ಕುಡಿಯುವ ನೀರಿಗೆ ಸೇರಿ ಸಂಪೂರ್ಣವಾಗಿ ಕಲುಷಿತಗೊಂಡಿದೆ.
10-12 ವರ್ಷದ ಸಮಸ್ಯೆಗೆ ಈ ತನಕ ಪರಿಹಾರ ಸಿಗದೇ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 150ಕ್ಕೂ ಅಧಿಕ ಕುಟುಂಬಗಳ ನಿವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. 150ಕ್ಕೂ ಹೆಚ್ಚು ಕುಟುಂಬಗಳು ಹೊಂದಿರುವ ಬಾವಿಗಳಿಗೆ ಮಾತ್ರವಲ್ಲದೆ ಸಮುದ್ರದ ಉಪ್ಪು ನೀರು ನದಿ, ಹೊಳೆಗೂ ಸೇರುತ್ತಿದೆ.

10ವರ್ಷಗಳಿಂದ ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿ ಅಧಿಕಾರಿಗಳಿಂದ ಹಿಡಿದು ಶಾಸಕರು, ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕೊರೊನಾ ಕಾಟದಿಂದ ಜನ ದಿನಸಿಗಾಗಿ ಪರಿತಪಿಸುತ್ತಿದ್ದರೆ, ಇಲ್ಲಿನವರು ಮಾತ್ರ ಕುಡಿಯಲು ಯೋಗ್ಯವಲ್ಲದ ನೀರನ್ನು ಕುಡಿಯುವ ಸ್ಥಿತಿಗೆ ತಲುಪಿದ್ದಾರೆ.

ರೋಗ ರುಜಿನಗಳ ತಾಣ: ಕಲುಷಿತಗೊಂಡ ನೀರನ್ನು ನೇರವಾಗಿ ಕುಡಿಯಲು ಸಾಧ್ಯವಿಲ್ಲ. ಪ್ರತಿ ಸಲವೂ ಬಿಸಿ ಮಾಡಿಯೇ ಕುಡಿಯಬೇಕು. ಅದೆಷ್ಟರ ಮಟ್ಟಿಗೆ ಈ ನೀರು ಬಿಸಿ ಮಾಡಿದರೆ ಕುಡಿಯಲು ಸೂಕ್ತ ಎಂಬುದು ಗೊತ್ತಿಲ್ಲ. ಉಪ್ಪು ನೀರಿನಿಂದ ಬಟ್ಟೆ, ಪಾತ್ರೆಗಳೆಲ್ಲಯೂ ಹಾನಿಯಾಗುವ ಭೀತಿಯಲ್ಲಿದೆ.

ಸತತವಾಗಿ ಜನಪ್ರತಿನಿಧಿಗಳನ್ನು ಗೆಲ್ಲಿಸಿದ್ದು ಬಿಟ್ಟರೆ ಜನರಿಗಾಗಿ ಅವರು ಸೇವೆ ಮಾತ್ರ ಮಾಡಿಲ್ಲ. ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ಜನಪ್ರತಿನಿಧಿಗಳು ಯಾರಿಲ್ಲವಾಗಿದ್ದಾರೆ ಎಂದು ಸ್ಥಳೀಯ ನಿವಾಸಿ ಮಾರುತಿ ನಾಯ್ಕ ಆರೋಪಿಸಿದರು.
ಸೂಕ್ತ ನೀರಿಲ್ಲದೇ ಬೇರೆಡೆಯಿಂದ ಹೊತ್ತು ತರುತ್ತಿದ್ದೇವೆ. ಚಿಕ್ಕಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ನೀರನ್ನು ತರಲು ಹೋಗುವುದು ಅಪಾಯವೂ ಕೂಡ. ನಾವು ಗೆಲ್ಲಿಸಿದ ಜನಪ್ರತಿನಿಧಿಗಳು ನಮ್ಮನ್ನು ಪಾರು ಮಾಡಿ ಎಂದು ನಿವಾಸಿ ವನಿತಾ ನಾಯ್ಕ ಬೇಡಿಕೊಂಡರು.