ಕಾರವಾರ(ಉತ್ತರಕನ್ನಡ): ಜಿಲ್ಲೆಯಲ್ಲಿ ದೇಶದ ಪ್ರತಿಷ್ಠಿತ ಯೋಜನೆಗಳಾದ ಕದಂಬ ನೌಕಾನೆಲೆ, ಕೈಗಾ ಅಣುವಿದ್ಯುತ್ ಸ್ಥಾವರಗಳಿವೆ. ಅಲ್ಲದೇ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಜಗತ್ ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ಜಿಲ್ಲೆಯು ಸೂಕ್ಷ್ಮ ಪ್ರದೇಶವಾಗಿದೆ. ಹೀಗಿರುವಾಗ ಕಳೆದ ಮೂರು ವರ್ಷಗಳಿಂದ ವಿವಿಧೆಡೆ ಸ್ಯಾಟಲೈಟ್ ಕರೆಗಳು ಹೋಗಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡುತ್ತಿದೆ. ಆದರೆ ಇದುವರೆಗೂ ಸಹ ಈ ಕರೆಗಳ ಜಾಡು ಪೊಲೀಸ್ ಇಲಾಖೆಗೂ ತಿಳಿಯದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಉತ್ತರಕನ್ನಡದಲ್ಲಿ ಸ್ಯಾಟಲೈಟ್ ಫೋನ್ ಕರೆಗಳು ಕಳೆದ ಎರಡು ಮೂರು ವರ್ಷಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಸ್ಯಾಟಲೈಟ್ ಕರೆಗಳು ಹೊರಹೋಗುವುದನ್ನು ಗುಪ್ತಚರ ಇಲಾಖೆ ಪತ್ತೆ ಮಾಡುತ್ತಿದೆ. ದಟ್ಟ ಅರಣ್ಯ ಪ್ರದೇಶದಲ್ಲಿ ಬಹುತೇಕ ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ.
ಜೊತೆಗೆ ಸಮುದ್ರ ಪ್ರದೇಶದಲ್ಲೂ ಸಹ ಸ್ಯಾಟಲೈಟ್ ಫೋನ್ ಆ್ಯಕ್ಟಿವ್ ಆಗಿರುವುದನ್ನ ಗುಪ್ತಚರ ಇಲಾಖೆ ಪತ್ತೆ ಮಾಡಿತ್ತಾದರೂ ಇದುವರೆಗೂ ಸಹ ಕರೆ ಮಾಡಿದ್ದು ಯಾರೆಂಬುದು ತಿಳಿದುಬಂದಿಲ್ಲ. ಕೈಗಾ, ನೌಕಾನೆಲೆಯಂತಹ ಸೂಕ್ಷ್ಮ ಪ್ರದೇಶಗಳನ್ನ ಹೊಂದಿರುವ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸ್ಯಾಟಲೈಟ್ ಕರೆಗಳು ಪತ್ತೆಯಾಗುತ್ತಿರೋದು ಆತಂಕಕಾರಿ ವಿಚಾರ ಅಂತಾರೆ ಸ್ಥಳೀಯರು.
ಜಿಲ್ಲೆಯ ಕಾರವಾರ, ಕೈಗಾ ಹಾಗೂ ಯಲ್ಲಾಪುರ ವ್ಯಾಪ್ತಿಯ ಅರಣ್ಯ ಪ್ರದೇಶ ಹಾಗೂ ಗೋಕರ್ಣ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಹಿಂದೆ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ಕಂಡುಬಂದಿದೆ. ಬಹುತೇಕ ಸಂದರ್ಭಗಳಲ್ಲಿ ದಟ್ಟ ಅರಣ್ಯ ಪ್ರದೇಶಗಳಲ್ಲೇ ಸ್ಯಾಟಲೈಟ್ ಫೋನ್ ಹೆಚ್ಚು ಬಾರಿ ಆ್ಯಕ್ಟೀವ್ ಆಗಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಸ್ಯಾಟಲೈಟ್ ಫೋನ್ ಕರೆ ಹಿಂಬಾಲಿಸಿ ಈ ಹಿಂದೆ ಯಲ್ಲಾಪುರ ಅರಣ್ಯ ಪ್ರದೇಶದಲ್ಲಿ ಪೊಲೀಸರು ಕೂಂಬಿಂಗ್ ಸಹ ನಡೆಸಿದ್ದರಾದರೂ ಸ್ಯಾಟಲೈಟ್ ಫೋನ್ ಮೂಲ ಮಾತ್ರ ಪತ್ತೆಯಾಗಿರಲಿಲ್ಲ. ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಈ ರೀತಿಯ ಚಟುವಟಿಕೆ ನಿರ್ಲಕ್ಷ್ಯ ಮಾಡುವುದು ಅಪಾಯಕಾರಿಯಾಗಿದೆ.ಪೊಲೀಸ್ ಇಲಾಖೆ ಇದರ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಈ ಬಗ್ಗೆ ಪ್ರತಿಕ್ರಿಯಿಸಿದರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್, ವಿವಿಧ ಭದ್ರತಾ ಸಂಸ್ಥೆಗಳು ಈ ಬಗ್ಗೆ ನಿಗಾ ಇರಿಸಿವೆ. ಇದುವರೆಗೂ ಯಾವುದೇ ಅನುಮಾನಾಸ್ಪದ ಪ್ರಕರಣಗಳು ಕಂಡುಬಂದಿಲ್ಲ. ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಸ್ಯಾಟಲೈಟ್ ಫೋನ್ ಬಳಕೆ ಮಾಡುವುದರಿಂದಾಗಿ ಕೆಲವೊಮ್ಮೆ ಅದು ಭೂಪ್ರದೇಶದಲ್ಲಿ ಪತ್ತೆಯಾದಂತೆ ತೋರಿಸಿರುವ ಸಾಧ್ಯತೆಗಳಿವೆ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ಸದ್ದು.. ಗುಪ್ತಚರ ಇಲಾಖೆ ಫುಲ್ ಅಲರ್ಟ್