ಕಾರವಾರ: ಉತ್ತರ ಕನ್ನಡ ಜಿಲ್ಲೆಯ ರೂಪ ಶಿವಪ್ಪ ನಾಯ್ಕ ಅವರು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಪ್ರಾಸ್ತಾವಿಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಅಂಕೋಲಾದ ಪುರಲಕ್ಕಿ ಬೇಣದ ನಿವಾಸಿಯಾದ ಇವರು ಸದ್ಯ ಗದಗ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದ ಪ್ರಧಾನ ಜಿಲ್ಲಾ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾನವ ಹಕ್ಕು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಇವರು, ರಾಷ್ಟ್ರ ಮಟ್ಟದದಲ್ಲಿ 40 ಅಭ್ಯರ್ಥಿಗಳ ಎದುರು ಪೈಪೋಟಿ ನೀಡಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಪ್ರಾಸ್ತವಿಕ ಅಧಿಕಾರಿಗಾಗಿ ಆಯ್ಕೆಯಾಗಿದ್ದಾರೆ.
ಅಂಕೋಲಾದ ದಿ. ಶಿವಪ್ಪ ನಾರಾಯಣ ಹಾಗೂ ದಿ. ರಮಾಬಾಯಿ ದಂಪತಿಯ ಪುತ್ರಿಯಾಗಿದ್ದು, ಇವರ ಪ್ರಾಥಮಿಕ ಶಿಕ್ಷಣ ಕಾರವಾರದ ಹಿಂದೂ ಹೈಸ್ಕೂಲಿನಲ್ಲಿ ಪೂರ್ಣಗೊಂಡಿದೆ. ಪ್ರೌಢ ಶಿಕ್ಷಣವನ್ನು ಅಂಕೋಲಾದ ವಿ. ಕೆ. ಗರ್ಲ್ಸ್ ಹೈಸ್ಕೂಲಿನಲ್ಲೂ, ಪದವಿಯನ್ನು ಅಂಕೋಲಾದ ಜಿ.ಸಿ. ಕಾಲೇಜಿನಲ್ಲಿ ಪಡೆದಿದ್ದಾರೆ. ಶಿರಸಿಯ ಎಂ.ಇ.ಎಸ್ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿಯನ್ನು ಪಡೆದು, ಶಿರಸಿ ನ್ಯಾಯಾಲಯದಲ್ಲಿ ತಮ್ಮ ವಕೀಲೆ ವೃತ್ತಿಯನ್ನು ಆರಂಭಿಸಿ ನಂತರ ಧಾರವಾಡದಲ್ಲಿ ವಕೀಲೆ ವೃತ್ತಿಯನ್ನು ಮುಂದುವರೆಸಿದ್ದರು.
ಓದಿ: ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಗಮನಾರ್ಹ ಸಾಧನೆ; ಹೆಚ್ಡಿಕೆ
ಇವರ ಪತಿ ಜಿ.ಜಿ. ನಾಯ್ಕ ಶಿರಸಿಯ ನಿವೃತ್ತ ಸಹಾಯಕ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಪುತ್ರಿಯರಾದ ಎಚ್. ಜೆ. ಶಿಲ್ಪಾ ಸಿವಿಲ್ ನ್ಯಾಯಾಧೀಶೆಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೋರ್ವ ಪುತ್ರಿ ಎಚ್.ಜಿ. ಶ್ರೇಯಾ ಬೆಂಗಳೂರಿನಲ್ಲಿ ವಕೀಲೆ ವೃತ್ತಿ ನಿರ್ವಹಿಸುತ್ತಿದ್ದಾರೆ.