ಕಾರವಾರ: ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದರಿಂದ ಪುರುಷ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ಜಿಲ್ಲಾ ಸಂಚಾಲಕ ಮಂಜುನಾಥ ಕುಮಾರ ಆಗೇರ ಆರೋಪಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ 2015ರ ಮೀಸಲಾತಿ ಹಂಚಿಕೆಯಲ್ಲಿ ಪುರುಷರಿಗೆ ಸ್ಥಾನ ವಂಚನೆಯಾಗಿ ಹಿನ್ನೆಡೆಯಾಗಿದೆ. ಜಿಲ್ಲೆಯ 226 ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 575 ಮೀಸಲು ಸ್ಥಾನಗಳಿವೆ. ಇದರಲ್ಲಿ ಮಹಿಳೆಯರಿಗೆ 480 ಸ್ಥಾನ, ಅಂದರೆ ಶೇ 83ರಷ್ಟು ಹಂಚಿಕೆಯಾಗಿದೆ. ಪುರುಷರಿಗೆ 96, ಅಂದರೆ ಶೇ 17ರಷ್ಟು ಮಾತ್ರ ದೊರೆತಿದ್ದು , ಇದು ಸಂವಿಧಾನದ 50:50 ಮೀಸಲು ಸ್ಥಾನ ಹಂಚಿಕೆಯ ಆಶಯಕ್ಕೆ ಧಕ್ಕೆಯನ್ನುಂಟು ಮಾಡಿದೆ.
ಹಿಂದಿನ ಪದಾವಧಿಯಲ್ಲಿ ಹಂಚಿದ ಮಹಿಳಾ ಸ್ಥಾನವನ್ನು ಮುಂದಿನ ಪದಾವಧಿಯಲ್ಲಿ ಅದೇ ಪ್ರವರ್ಗಕ್ಕೆ ಅಥವಾ ಮಹಿಳೆಗೆ ಸ್ಥಾನ ಹಂಚಿಕೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ 2010ರಲ್ಲಿ ಇರುವ ಮೀಸಲು ಹಂಚಿಕೆಯನ್ನು 2015ರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮುಂದುವರೆಸಿ ಪುರುಷರಿಗೆ ಸ್ಥಾನ ವಂಚಿತರಾಗುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.