ಕಾರವಾರ (ಉತ್ತರಕನ್ನಡ): ರಾಮಮಂದಿರ ನಿರ್ಮಾಣಕ್ಕೆ ಯಾರು ಹಣ ಕೊಡ್ಲಿ, ಬಿಡಲಿ ಮಂದಿರ ನಿರ್ಮಾಣ ಆಗೇ ಆಗುತ್ತದೆ ಎಂದು ಹೇಳುವ ಮೂಲಕ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹೊನ್ನಾವರಕ್ಕೆ ಆಗಮಿಸಿದ್ದ ಅವರು ರಾಮಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ನಿಧಿ ಸಹಾಯ ಮಾಡಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಕೊಡ್ಲಿ, ಬಿಡ್ಲಿ ರಾಮ ಮಂದಿರ ನಿರ್ಮಾಣ ಆಗೇ ಆಗುತ್ತದೆ. ರಾಜ್ಯಾದ್ಯಂತ ಜನ ದೇಣಿಗೆ ನೀಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ 6.23 ಕೋಟಿ ರೂ. ಸಂಗ್ರಹಿಸಿ ಕೊಟ್ಟಿದ್ದೇವೆ. ರಾಜ್ಯದ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇಷ್ಟು ಮೊತ್ತದ ನಿಧಿಯನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡಿಲ್ಲ. ನಾನು ಕೂಡ ವೈಯಕ್ತಿಕವಾಗಿ 51 ಲಕ್ಷ ರೂ.ಯನ್ನು ದೇಣಿಗೆಯಾಗಿ ಅರ್ಪಿಸಿದ್ದೇನೆ. ರಾಮಮಂದಿರ ಐತಿಹಾಸಿಕವಾಗಿ ನಿರ್ಮಾಣವಾಗುತ್ತೆ, ಇಡೀ ಪ್ರಪಂಚವೇ ನೋಡುವಂತಾಗುತ್ತದೆ ಎಂದರು.
ಓದಿ:ವಿಶ್ವದಾಖಲೆ ಬರೆದ 'ರಾಮಾಯಣ' ಸೀರಿಯಲ್; 999 ಶತಕೋಟಿಗೇರಿದ ವೀಕ್ಷಣಾ ನಿಮಿಷ!
ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 8ನೇ ತಾರೀಖಿಗೆ ರಾಜ್ಯದ ಅಭಿವೃದ್ಧಿ ಹಾಗೂ ಯೋಜನೆಗಳಿಗೆ ಪೂರಕವಾಗೋ ಬಜೆಟ್ ಮಂಡಿಸುವ ವಿಶ್ವಾಸವಿದೆ. ಜನರ ನಿರೀಕ್ಷಣೆ ಬೇಕಾದಷ್ಟಿದೆಯಾದ್ರೂ, ಎಲ್ಲವನ್ನೂ ಇತಿಮಿತಿನಲ್ಲೇ ಮಾಡಬೇಕಿದೆ. ಕೊರೊನಾದಿಂದಾಗಿ ಆರ್ಥಿಕ ಇತಿಮಿತಿ ನೋಡಿಕೊಂಡು ಬಜೆಟ್ ಮಂಡಿಸಬೇಕಿದೆ. ರೈತರು ಹಾಗೂ ಮೀನುಗಾರರ ಪರವಾಗಿ ಮುಖ್ಯಮಂತ್ರಿಗಳು ಅತ್ಯುತ್ತಮ ಬಜೆಟ್ ಮಂಡಿಸುವ ವಿಶ್ವಾಸವಿದೆ ಎಂದು ಹೇಳಿದರು.