ಕಾರವಾರ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟಿದ್ದ ನೆಲೆಮಾಂವಿನ ಗಣಪತಿ ಭಟ್ ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಣಪತಿ ಭಟ್ ಸಿದ್ದಾಪುರ ತಾಲೂಕಿನ ನಡಿಮನೆ ಬಳಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆಸಂಬಂಧಿಸಿದಂತೆ ಗಣಪತಿ ಭಟ್ ಅವರನ್ನು ಬೆಂಗಳೂರಿನಿಂದ ಸಿದ್ದಾಪುರದ ಹೇರೂರಿಗೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇರಲಿಲ್ಲ. ವಿಚಾರಣೆ ಬಳಿಕ ಮತ್ತೆ ಸಿದ್ದಾಪುರಕ್ಕೆ ಆಗಮಿಸಿದ್ದರು. ಸಿದ್ದಾಪುರ ತಾಲೂಕಿನ ನೆಲೆಮಾವು ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಆಗಿದ್ದ ಇವರು ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ಇನ್ನು ಬಂದಿಲ್ಲ.
ಪ್ರಕರಣದ ಹಿನ್ನೆಲೆ:ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನೇಮಕಾತಿ ನಡೆಸಿ ಅಭ್ಯರ್ಥಿಗಳಿಂದ ಕೋಟಿ ಕೋಟಿ ಹಣ ಲೂಟಿ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಸಿಐಡಿಗೆ ತನಿಖೆಗೆ ಒಳಪಡಿಸಿತು. ಈ ವೇಳೆ ಹಲವಾರು ಜನ ಪ್ರಕರಣದ ಹಿಂದೆ ಇರುವ ಅನುಮಾನ ಕಂಡುಬಂದಿತ್ತು. ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ.
ಇನ್ನು ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಬಂಧಿಸಿ ವಿಚಾರಣೆಗೊಡಿಸಿದಾಗ ಈ ಇಬ್ಬರು ಅಭ್ಯರ್ಥಿಗಳು ಗಣಪತಿ ಭಟ್ ಹೆಸರನ್ನು ಹೇಳಿದ್ದರಂತೆ. ಅದರಂತೆ ಸಿದ್ದಾಪುರ ತಾಲೂಕಿನ ನೆಲೆಮಾಂವ ಸೇವಾ ಸಹಕಾರ ಸಂಸ್ಥೆಯ ಅಧ್ಯಕ್ಷರಾಗಿದ್ದ ಗಣಪತಿ ಭಟ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಇನ್ನು ಗಣಪತಿ ಭಟ್ ರಾಜಕಾರಣಿಯೇನು ಆಗಿರಲಿಲ್ಲ. ಆದರೆ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಜತೆ ಉತ್ತಮ ಸಂಬಂಧ ಹೊಂದಿದ್ದರು. ಅಲ್ಲದೆ ಎಡಿಜಿಪಿ ಅಮೃತ್ ಪೌಲ್ ಅವರ ಜೊತೆ ಸಹ ಗಣಪತಿ ಭಟ್ ಉತ್ತಮ ಸಂಬಂಧ ಹೊಂದಿದ್ದರು ಎಂಬ ಆರೋಪಗಳು ಈ ಹಿಂದೆ ಕೇಳಿ ಬಂದಿದ್ದವು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ಸಿಐಡಿ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಏನಿದೆ?
ಕಚೇರಿ ಸಿಬ್ಬಂದಿ ಆತ್ಮಹತ್ಯೆ:
ಕಾರವಾರ ನಗರದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಚೇರಿಯಲ್ಲಿ ಸಿಬ್ಬಂದಿ ನೇಣಿಗೆ ಶರಣಾದ ಘಟನೆ ಶುಕ್ರವಾರ ಸಂಭವಿಸಿದೆ. ಕಾರವಾರ ಕೇಶವ ನಾಯ್ಕ ವಾಡಾದ ನಿವಾಸಿ ಸತೀಶ್ ಪಾಂಡು ನಾಯ್ಕ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಚೇರಿಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ. ಶುಕ್ರವಾರ ಬೆಳಗ್ಗೆ ಕಚೇರಿಗೆ ಬಂದು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂಓದಿ:ವಿವಾಹಿತ ಮಹಿಳೆಯ ಸಂಬಂಧ: 19 ವರ್ಷದ ವಿದ್ಯಾರ್ಥಿ ಬಲಿ?