ಕಾರವಾರ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಎಚ್ಒ (ಸಮುದಾಯ ಆರೋಗ್ಯ ಅಧಿಕಾರಿಗಳು) ಅಥವಾ ಎಂಎಲ್‌ಎಚ್‌ಪಿಗಳಿಗೆ ಬೇರೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲು ಪರೀಕ್ಷೆಗೆ ಹಾಜರಾಗಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಜಿಲ್ಲಾಡಳಿತ ಸತಾಯಿಸುತ್ತಿದೆ ಎನ್ನುವ ಆರೋಪವಿದೆ. ಹಾಗಾಗಿ, 20ಕ್ಕೂ ಹೆಚ್ಚು ಸಿಎಚ್ಒಗಳು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಎದುರು ನಿನ್ನೆ ರಾತ್ರಿಯವರೆಗೆ ಕುಳಿತು ಧರಣಿ ನಡೆಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಒಳಗುತ್ತಿಗೆಯಲ್ಲಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯಿಂದಲೂ ಅನೇಕರು ಎಂಎಲ್‌ಎಚ್‌ಪಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಮೂರು ವರ್ಷಗಳ ಒಪ್ಪಂದದಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ. ಇದೀಗ ಆರು ಜಿಲ್ಲೆಗಳಲ್ಲಿ 1,307 ಎಂಎಲ್‌ಎಚ್‌ಪಿ ಹುದ್ದೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಆನ್‌ಲೈನ್ ಪರೀಕ್ಷೆ ತೆಗೆದುಕೊಳ್ಳಬೇಕಿದೆ.
ಈಗಾಗಲೇ ಕಾರ್ಯನಿರತ ಎಂಎಲ್‌ಎಚ್‌ಪಿಗಳು ಈ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕ ಎನ್‌ಒಸಿ ಪಡೆಯಬೇಕಿದೆ. ಒಂದು ವೇಳೆ ಎನ್‌ಒಸಿ ಪಡೆದು ಬೇರೆ ಜಿಲ್ಲೆಗಳಲ್ಲಿ ನೇಮಕಾತಿಯಾದರೆ ಕಾರ್ಯನಿರತ ಜಿಲ್ಲೆಯಿಂದ ಬಿಡುಗಡೆಗೊಳ್ಳುವಪೂರ್ವ ಮೊದಲೇ ಮಾಡಿಕೊಂಡಿದ್ದ ಕರಾರು ಪತ್ರದಂತೆ ಮೊತ್ತವನ್ನು ಜಿಲ್ಲಾ ಆರೋಗ್ಯ ಸಂಘಕ್ಕೆ ಪಾವತಿಸಬೇಕು. ಪರೀಕ್ಷೆಯಲ್ಲಿ ಆಯ್ಕೆಯಾಗದಿದ್ದರೆ ಪುನಃ ಮೊದಲಿನ ಜಿಲ್ಲೆಯಲ್ಲೇ ಎಂಎಲ್‌ಎಚ್‌ಪಿಗಳಾಗಿ ಮುಂದುವರಿಯಬೇಕಿದೆ. ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದಲೇ ಅಧಿಕೃತ ಜ್ಞಾಪನ ಪತ್ರವನ್ನೂ ಹೊರಡಿಸಲಾಗಿದೆ. ಆದರೆ ಈ ಪರೀಕ್ಷೆ ತೆಗೆದುಕೊಳ್ಳಲು ಉತ್ತರ ಕನ್ನಡದ ಜಿಲ್ಲಾಡಳಿತದ ಅಧಿಕಾರಿಗಳು ಜಿಲ್ಲೆಯಲ್ಲಿನ ಕಾರ್ಯನಿರತ ಎಂಎಲ್‌ಎಚ್‌ಪಿಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಯಾಕೆ ಅವಕಾಶ ನೀಡುತ್ತಿಲ್ಲ?
ಎಂಎಲ್‌ಎಚ್‌ಪಿಗಳೇ ಹೇಳುವ ಪ್ರಕಾರ, ಬೇರೆ ಜಿಲ್ಲೆಗಳಿಂದ ಉತ್ತರ ಕನ್ನಡಕ್ಕೆ ಬಂದು ಕೆಲಸ ಮಾಡುವವರು ಅತಿ ಕಡಿಮೆ. ಅದರಲ್ಲೂ ಈಗಾಗಲೇ ನೇಮಕಾತಿಯಾದವರು ಎನ್‌ಒಸಿ ಪಡೆದು ಬೇರೆ ಜಿಲ್ಲೆಗಳಿಗೆ ನೇಮಕಾತಿಯಾದರೆ ಉತ್ತರ ಕನ್ನಡದ ಕತೆಯೇನು? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಿಳಿಸಿದ್ದಾರಂತೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಇರುವ ಎಂಎಲ್‌ಎಚ್‌ಪಿಗಳಿಗೆ ಎನ್‌ಒಸಿ ನೀಡದಂತೆ ಸೂಚಿಸಿದ್ದಾರಂತೆ. ಹೀಗಾಗಿ ಆರೋಗ್ಯಾಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಎಂಎಲ್‌ಎಚ್‌ಪಿಗಳು ಆರೋಪಿಸಿದ್ದಾರೆ.
ದೂರೇನು?
ಕಳೆದ ಒಂದು ತಿಂಗಳಿನಿಂದ ಎನ್‌ಒಸಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದೇವೆ. ಆದರೆ ಎನ್‌ಒಸಿ ನೀಡುತ್ತಿಲ್ಲ. ಕೇಳಿದರೆ ಬೇರೆ ಬೇರೆ ಕಾರಣಗಳನ್ನು ಹೇಳುತ್ತಿದ್ದಾರೆ. ನಮಗೆ ನಮ್ಮ ಜಿಲ್ಲೆಗಳಲ್ಲಿ ಕೆಲಸ ಮಾಡಲು ಸಿಕ್ಕಿರುವ ಅವಕಾಶವಿದು. ನೇಮಕಾತಿಯಾಗುತ್ತದೆಯೋ, ಇಲ್ಲವೋ ಬೇರೆ ವಿಚಾರ. ಆದರೆ ಪರೀಕ್ಷೆ ಬರೆಯಲು ಎನ್‌ಒಸಿ ನೀಡಲು ಹೀಗೆ ಸತಾಯಿಸುತ್ತಿರುವುದು ಸರಿಯಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಾದರೂ ಆರೋಗ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ: ಬಿಎಸ್ಪಿ, ಎಸ್ಪಿ ಪಕ್ಷದ ನಾಯಕರು ಸೇರಿ 7 ಮಂದಿ ಅರೆಸ್ಟ್
ಒಂದು ವೇಳೆ ನಾವು ನೇಮಕಾತಿಯಾದರೆ ಕರಾರು ಪತ್ರದಲ್ಲಿ ನಮೂದಾಗಿರುವ ಮೊತ್ತವನ್ನು ನೀಡಲು ಬದ್ಧರಿದ್ದೇವೆಂದು ಹೇಳಿದರೂ ಕೇಳುತ್ತಿಲ್ಲ. ಬೆಳಿಗ್ಗಿನಿಂದ ಕಾಯಿಸಿ, ಸಂಜೆಯ ಬಳಿಕ ಮದುವೆಯಾದವರಿಗೆ ಮಾತ್ರ ಎನ್‌ಒಸಿ ಕೊಡುತ್ತೇವೆ, ತಂದೆ- ತಾಯಿ ಇಲ್ಲದವರಿಗೆ ಅವರ ಮರಣದ ಕಾರಣವಿರುವ ಮರಣ ದಾಖಲೆ ನೀಡಿದರೆ ಎನ್‌ಒಸಿ ಕೊಡುತ್ತೇವೆ ಎಂದೆಲ್ಲ ಪೀಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಜೀಪು ಬಿಟ್ಟು ತೆರಳಿದ ಡಿಹೆಚ್‌ಒ:
ಆರು ಜಿಲ್ಲೆಗಳಲ್ಲಿ 1,307 ಎಂಎಲ್‌ಎಚ್‌ಪಿ ಹುದ್ದೆಗಳಿಗಾಗಿ ನಡೆಯಲಿರುವ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು ಸೋಮವಾರವೇ ಕಡೆಯ ದಿನ. ಹೀಗಾಗಿ ಯಾವುದೇ ಕಾರಣಕ್ಕೂ ನಿನ್ನೆ (ಶನಿವಾರ) ಎನ್‌ಒಸಿ ಪಡೆಯಲೇಬೇಕೆಂದು ಎಂಎಲ್‌ಎಚ್‌ಪಿಗಳು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರಗೂ ಕಾಯುತ್ತಿದ್ದರು. ಆದರೆ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸರ್ಕಾರಿ ಜೀಪಿನಲ್ಲಿ ಮನೆಗೆ ಹೊರಡಲು ಮುಂದಾದಾಗ ಮತ್ತೆ ಮತ್ತೆ ಎಂಎಲ್‌ಎಚ್‌ಪಿಗಳು ಎನ್‌ಒಸಿ ಕೊಡಲು ಮನವಿ ಮಾಡಿ ಜೀಪಿಗೆ ಅಡ್ಡ ಬಂದಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಆರೋಗ್ಯಾಧಿಕಾರಿಗಳು ಜೀಪು ಬಿಟ್ಟು ಬೇರೆ ವಾಹನದಲ್ಲಿ ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.