ಕಾರವಾರ(ಉತ್ತರ ಕನ್ನಡ): ಯಾವುದೇ ಕಟ್ಟಡದ ಕಾಮಗಾರಿ ಆರಂಭ ಮಾಡುವ ಮುನ್ನ ಗುದ್ದಲಿ ಪೂಜೆ ನೆರವೇರಿಸಿ, ಅಡಿಗಲ್ಲು ಹಾಕಿ ಕೆಲಸ ಪ್ರಾರಂಭಿಸುವುದು ಸಾಮಾನ್ಯ. ಆದರೆ, ಇಲ್ಲೊಂದು ಕಡೆ ಈಗಾಗಲೇ ಕಾಮಗಾರಿ ಆರಂಭವಾಗಿ ಮೊದಲನೇಯ ಹಂತ ಪೂರ್ಣಗೊಂಡಿರುವ ಕಟ್ಟಡಕ್ಕೆ ಇದೀಗ ಸಚಿವರಿಂದ ಅಡಿಗಲ್ಲು ಹಾಕಿಸೋದಕ್ಕೆ ಮುಂದಾಗುತ್ತಿರೋದು ಜನರ ವಿರೋಧಕ್ಕೆ ಗುರಿಯಾಗಿದೆ.
ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ಸದ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು ರಾಜಕೀಯ ಪಕ್ಷಗಳಿಗೆ ಒಂದು ರೀತಿಯ ಚುನಾವಣಾ ಅಸ್ತ್ರವಾಗಿ ಪರಿಣಮಿಸಿದೆ. ಸುಸಜ್ಜಿತ ಆಸ್ಪತ್ರೆ ನಿರ್ಮಿಸಿಕೊಟ್ಟಲ್ಲಿ ಮತದಾರರು ಮುಂಬರುವ ಚುನಾವಣೆಯಲ್ಲಿ ತಮ್ಮನ್ನ ಬೆಂಬಲಿಸುತ್ತಾರೆ ಅನ್ನೋದು ಬಿಜೆಪಿ ಲೆಕ್ಕಾಚಾರ. ಈ ನಿಟ್ಟಿನಲ್ಲಿ ಆಸ್ಪತ್ರೆ ನಿರ್ಮಾಣ ವಿಚಾರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಕಾರವಾರದ ಮೆಡಿಕಲ್ ಕಾಲೇಜಿಗೆ ಅಗತ್ಯ ಮೂಲ ಸೌಲಭ್ಯಗಳನ್ನ ಒದಗಿಸಿಕೊಡಲು ಶಾಸಕಿ ರೂಪಾಲಿ ನಾಯ್ಕ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.
ಅದರಂತೆ ಕಾರವಾರದಲ್ಲಿ 150 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ 450 ಹಾಸಿಗೆಗಳ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶಂಕುಸ್ಥಾಪನೆಗೆ ಇದೀಗ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ರನ್ನ ಕರೆಯಿಸುತ್ತಿದ್ದು ಇದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆ ಕಾಮಗಾರಿ ಕಳೆದ 2021ರ ಏಪ್ರಿಲ್‌ನಲ್ಲೇ ಪ್ರಾರಂಭವಾಗಿದ್ದು ಈಗಾಗಲೇ ಒಂದು ಮಹಡಿ ಕಾಮಗಾರಿ ಪೂರ್ಣಗೊಂಡು ಎರಡನೇಯ ಮಹಡಿ ಕಾಮಗಾರಿ ಪ್ರಗತಿಯಲ್ಲಿದೆ. ಇದೇ ಅಕ್ಟೋಬರ್ 20ಕ್ಕೆ ಕಾಮಗಾರಿ ಮುಕ್ತಾಯಗೊಳಿಸಬೇಕಾಗಿತ್ತಾದರೂ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.
ಕಣ್ಣೊರೆಸುವ ತಂತ್ರ : ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶಿರಸಿ ಕಾರವಾರದಲ್ಲಿ ಆಸ್ಪತ್ರೆಗಳಿಗೆ ಹೆಚ್ಚುವರಿ ಸೌಲಭ್ಯ ಹಾಗೂ ಅಂಕೋಲಾದಲ್ಲಿ ಎಮರ್ಜೆನ್ಸಿ ಕೇರ್ ಆರಂಭಿಸೋದಾಗಿ ಹೇಳಿದ್ದಾರೆ. ಆದರೆ, ಸುಸಜ್ಜಿತ ಆಸ್ಪತ್ರೆಗೆ ಒಂದೇ ಕಡೆ ಎಲ್ಲ ಸೌಲಭ್ಯಗಳು ಸಿಗುವಂತಾದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗಲಿದ್ದು ಸರ್ಕಾರ ಜನರ ಕಣ್ಣೊರೆಸುವ ಬದಲು ಈ ನಿಟ್ಟಿನಲ್ಲಿ ಚಿಂತನೆ ನಡೆಸಲಿ ಅಂತಾ ಮಾಜಿ ಶಾಸಕ ಸತೀಶ್ ಸೈಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಶ್ವಾಸನೆ: ಬಾಯಿಮಾತಿನ ಭರವಸೆಯಾಗುವ ಆತಂಕ