ಕಾರವಾರ: ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 8.90 ಲಕ್ಷ ರೂ ನಗದನ್ನು ಚಿತ್ತಾಕುಲ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಡುಪಿ ಮೂಲದ ಉದ್ಯಮಿ ಅನುಪ್ ಹಣ ಸಾಗಿಸುತ್ತಿದ್ದ ವ್ಯಕ್ತಿಯಾಗಿದ್ದಾರೆ. ಗೋವಾ ಕಡೆಯಿಂದ ಉಡುಪಿಗೆ ಹಣ ಸಾಗಿಸುತ್ತಿದ್ದರು.
ಪೊಲೀಸರು ಕಾರಿನ್ನು ತಪಾಸಣೆ ನಡೆಸಿದಾಗ ನಗದು ಪತ್ತೆಯಾಗಿತ್ತು, ಆದರೆ ಈ ಹಣಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.39 ಲಕ್ಷ ಹಣ ವಶ: ದಾಖಲೆ ಇಲ್ಲದ ಬೈಕ್ನಲ್ಲಿ ಸಾಗಿಸುತ್ತಿದ್ದ 3.39 ಲಕ್ಷ ರೂ ಹಣವನ್ನು ಮುಂಡಗೋಡ ತಾಲೂಕಿನ ಅಗಡಿ ಚೆಕ್ ಪೋಸ್ಟ್ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಸನಸಾಬ ಹಣ ಸಾಗಿಸುತ್ತಿದ್ದ ವ್ಯಕ್ತಿ. ಇವರು ಹಣದೊಂದಿಗೆ ಹುಬ್ಬಳ್ಳಿಯಿಂದ ಮುಂಡಗೋಡಕ್ಕೆ ಬರುತ್ತಿದ್ದರು. ಈ ವೇಳೆ ಪೊಲೀಸರು ಅಗಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಹಣ ಪತ್ತೆಯಾಗಿದೆ. ಯಾವುದೇ ದಾಖಲೆ ಇಲ್ಲದ ಕಾರಣ ಹಣವನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಸಿಪಿಐ ಎಸ್ ಎಸ್ ಸಿಮಾನಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ದಾಖಲೆ ಇಲ್ಲದೆ 14 ಲಕ್ಷ ಹಣ ಸಾಗಿಸುತ್ತಿದ್ದ ಮೂವರು ಪೊಲೀಸ್ ವಶಕ್ಕೆ: ಮತ್ತೊಂದೆಡೆ ದಾಖಲೆ ಇಲ್ಲದೆ 14 ಲಕ್ಷಕ್ಕೂ ಹೆಚ್ಚು ಹಣವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ತಾಲೂಕಿನ ಸರ್ಪನಕಟ್ಟೆ ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಶ್ವಂತ ಸುಕ್ರ ಗೊಂಡ ಕಟಗಾರಕೊಪ್ಪ ಭಟ್ಕಳ, ಶ್ರೀನಿವಾಸ ನಾರಾಯಣ ಗೌಡ ಗುಣವಂತೆ ಹೊನ್ನಾವರ, ರಘು ಅನಂತ ನಾಯ್ಕ, ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರ ಠಾಣೆಯ ಪಿಎಸ್ಐ ಸಂತೋಷ ಹಾಗೂ ಸಿಬ್ಬಂದಿ ಸರ್ಪನಕಟ್ಟೆ ಪೊಲೀಸ್ ಚೆಕ್ ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಉಡುಪಿ ಕಡೆಯಿಂದ ಭಟ್ಕಳ ಕಡೆಗೆ ಹೊರಟಿದ್ದ ಕಾರನಲ್ಲಿ 14,90,125 ಲಕ್ಷ ನಗದು ಪತ್ತೆಯಾಗಿತ್ತು. ಆರೋಪಿಗಳು ಈ ಹಣವನ್ನು ಮುರುಡೇಶ್ವರದ ಕಡೆಗೆ ಸಾಗಿಸುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ತಂತಿ ಸ್ಪರ್ಶಿಸಿ ಹೊತ್ತಿ ಉರಿದ ಲಾರಿ: ಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ಶಿರಸಿ ತಾಲೂಕಿನ ಬಿಸಲಕೊಪ್ಪ ಬಳಿ ನಡೆದಿದೆ. ದಾಸನಕೊಪ್ಪದ ರಂಗಾಪುರದಿಂದ ಬಿಳಿಹುಲ್ಲು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಬಿಸಲಕೊಪ್ಪ ಸಮೀಪ ಹೋಗುತ್ತಿರುವಾಗ ಕೆಳಗೆ ಜೋತುಬಿದ್ದಿದ್ದ ವಿದ್ಯುತ್ ತಂತಿ ತಾಗಿ ಬೆಂಕಿಹೊತ್ತಿಕೊಂಡಿದೆ.
ತಕ್ಷಣ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಜಿಗಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ಲಾರಿ ಹಾಗೂ ಹುಲ್ಲು ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಹೊತ್ತಿರುವ ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟರು ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಳಗಾವಿ: ಎರಡು ಪ್ರತ್ಯೇಕ ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ 72 ಲಕ್ಷ ರೂ. ಪೊಲೀಸರ ವಶಕ್ಕೆ