ಭಟ್ಕಳ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶಾಂತಿ ಸಭೆ ಹಮ್ಮಿಕೊಳ್ಳಲಾಗಿತ್ತು.
ತಹಶೀಲ್ದಾರ್, ಪೊಲೀಸ್ ಇಲಾಖೆ ಅಧಿಕಾರಿಗಳು, ವಿವಿಧ ಸಮುದಾಯದ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ಭರತ್, ಈ ಬಾರಿ ಗಣೇಶ ಹಬ್ಬವನ್ನು ಮನೆಯಲ್ಲಿಯೇ ಆಚರಿಸಿ ಜನತೆ ಸಹಕರಿಸಬೇಕು ಎಂದರು.
ಸಾರ್ವಜನಿಕವಾಗಿ ಹಬ್ಬ ಆಚರಿಸಲು ಸ್ವಲ್ಪ ಸಡಿಲಿಕೆ ನೀಡಲಾಗಿದ್ದು, ಷರತ್ತುಗಳ ಪಾಲನೆ ಕಡ್ಡಾಯ. ಮುಖ್ಯವಾಗಿ ಶಾಂತಿ ಸುವ್ಯವಸ್ಥೆಯಿಂದ ಹಬ್ಬವನ್ನು ಆಚರಿಸಿಕೊಂಡು ಹೋಗುವಂತೆ ಸಮಿತಿಯವರು ಹಾಗೂ ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಸಹಕರಿಸಬೇಕೆಂದು ಹೇಳಿದರು.
ಭಟ್ಕಳ ಎಎಸ್ಪಿ ನಿಖಿಲ್ ಬಿ. ಮಾತನಾಡಿ ಈಗಾಗಲೇ ಗಣೇಶೋತ್ಸವ ಸಮಿತಿ ಪ್ರಮುಖರೊಂದಿಗೆ ಸಾಕಷ್ಟು ಸುತ್ತಿನ ಸಭೆಯನ್ನು ಮಾಡಿದ್ದು ಅಂದೇ ಎಲ್ಲಾ ತೀರ್ಮಾನವನ್ನು ಹೇಳಿದ್ದೇವೆ. ಕೊರೊನಾದಿಂದ ದೂರವಿದ್ದು ಗಣೇಶ ಹಬ್ಬ ಆಚರಿಸಿ ಎಂದು ತಿಳಿಸಿದರು.
ಭಟ್ಕಳದಲ್ಲಿ ಎರಡು ದಿನದಲ್ಲಿ ಸಾರ್ವಜನಿಕ ಗಣೇಶೋತ್ಸವ ಮುಗಿಯಬೇಕಿದೆ. ಕನಿಷ್ಠ 20 ಮಂದಿಯೊಳಗೆ ಹಬ್ಬದ ಆಚರಣೆಗಳು ಮುಗಿಯಬೇಕು. ಸ್ಯಾನಿಟೈಜರ್, ಮಾಸ್ಕ್ ಕಡ್ಡಾಯದ ಬಗ್ಗೆ ಸಮಿತಿಯವರು ಭಕ್ತರಿಗೆ ಮಾಹಿತಿ ನೀಡಬೇಕು ಮತ್ತು ತೀರ್ಥ ಪ್ರಸಾದ ಹಂಚಿಕೆಗೆ ಈ ಬಾರಿ ಅವಕಾಶ ಇಲ್ಲವಾಗಿದ್ದು ಇದರ ಬಗ್ಗೆಯೂ ಜಾಗೃತಿ ಮೂಡಬೇಕಿದೆ. ಪೊಲೀಸ್ ಇಲಾಖೆ ಎಲ್ಲದರ ಮೇಲೆ ನಿಗಾ ಇರಿಸಲಿದೆ ಎಂದರು.