ಶಿರಸಿ : ಎರಡು ದಿನಗಳ ಹಿಂದೆ ನಗರದಲ್ಲಿ ನಡೆದ ಬರ್ಬರ ಹತ್ಯೆಗೆ ಕೋಮು ಬಣ್ಣ ಹಚ್ಚುವ ಪ್ರಯತ್ನ ನಡೆದಿದ್ದು, ಇದಕ್ಕೆ ಪ್ರಚೋದನೆ ನೀಡುವ ಪೋಸ್ಟ್ ಹಾಕಿದ್ದ ಮುಸ್ಲಿಂ ಉಮ್ಮತ್ ಫೇಸ್ಬುಕ್ ಖಾತೆದಾರನ ಮೇಲೆ ಪೊಲೀಸರೆ ಸ್ವಯಂ ದೂರು ದಾಖಲಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ಒಂದೇ ಕೋಮಿನ ಎರಡು ಗುಂಪಿನ ಯುವಕರು ಹೊಡೆದಾಡಿಕೊಂಡಿದ್ದರು. ಈ ಘಟನೆಯಲ್ಲಿ ಅಸ್ಲಂ ಬಾಬಾಜಾನ್ ಎಂಬ ಯುವಕ ಮೃತಪಟ್ಟಿದ್ದ. ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಮೊಹಮ್ಮದ್ ಆರೀಶ್ ಮತ್ತು ನಿಸ್ಸಾರ್ ಅಹಮ್ಮದ್ ಶೇಖ್ ಎನ್ನುವವರನ್ನ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವಕ ಎಸ್ಡಿಪಿಐ ಸಂಘಟನೆಯ ಸದಸ್ಯನಾಗಿದ್ದಾನೆ. ಚೂರಿ ಇರಿತಕ್ಕೊಳಗಾದವ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷನಾಗಿದ್ದಾನೆ. ಇದರಿಂದ ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಉಂಟು ಮಾಡಿದೆ. ಇದರ ನಡುವೆ ಮುಸ್ಮಿಂ ಉಮ್ಮತ್ ಎನ್ನುವ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಈ ಮುಸ್ಲಿಂ ಯುವಕನ ಸಾವಿಗೆ ಸಂಘ ಪರಿವಾರ ಕಾರಣ. ನಮ್ಮ ಸಹೋದರನ ಹನಿ ರಕ್ತಕ್ಕೂ ಬೆಲೆ ತೆರಬೇಕಾದೀತು ಎಂದು ಪೋಸ್ಟ್ ಮಾಡಿದ್ದಾನೆ.
ಈ ಪೋಸ್ಟ್ ಸಮಾಜದ ಸಾಮರಸ್ಯ ಕದಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿ ಶಿರಸಿ ಮಾರುಕಟ್ಟೆ ಪೊಲೀಸರು ಐಪಿಸಿ ಸೆಕ್ಷನ್ 153,153(ಎ), 505(೨) ಅಡಿಯಲ್ಲಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.