ಕಾರವಾರ(ಉತ್ತರ ಕನ್ನಡ): 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನೋರ್ವ ತನ್ನ ಸ್ನೇಹಿತರಿಂದಲೇ ಕೊಲೆಯಾಗಿರುವ ಘಟನೆ ತಾಲೂಕಿನ ಮಲ್ಲಾಪುರ ವ್ಯಾಪ್ತಿಯ ಬೋಳ್ವೆಯಲ್ಲಿ ನಡೆದಿದೆ. ಧೋಲ್ ಹಳಗಾದ ಅನೂಜ್ ನಾಯ್ಕ (26) ಎಂಬುವವನೇ ಹತ್ಯೆಯಾದ ಯುವಕ.
ಅನೂಜ್ ನಾಯ್ಕ ಮೇ 6 ರಂದು ಮಲ್ಲಾಪುರಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ. ಸ್ನೇಹಿತರೆಲ್ಲರೂ ತಡರಾತ್ರಿ ನದಿ ದಂಡೆಯಲ್ಲಿ ಪಾರ್ಟಿ ಮಾಡಿ ಮಲಗಿದ್ದರು. ಆದರೆ ಬೆಳಗ್ಗೆ ಎದ್ದು ನೋಡಿದಾಗಿ ಅನೂಜ್ ಎಲ್ಲೂ ಕಾಣಿಸಲಿಲ್ಲ. ಅನೂಜ್ ನಾಪತ್ತೆಯಾಗಿದ್ದಾನೆ ಎಂದು ಸ್ನೇಹಿತರು ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿದ್ದರು. ಆದರೆ ನಡೆದ ವಿಚಾರವೇ ಬೇರೆ ಇತ್ತು.
ಮೇ 8 ರಂದು ಯುವಕನ ಶವ ಬೋಳ್ವೆಯ ಕಾಳಿ ನದಿ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ಈ ನಡುವೆ ಕುಟುಂಬಸ್ಥರು ಅನೂಜ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಕೊನೆಗೆ ಪೊಲೀಸರು ಪಾರ್ಟಿಗೆ ಕರೆದುಕೊಂಡು ತೆರಳಿದ್ದ ಉಳಗಾದ ಸಾಗರ್ ತಳಪನಕರ್ ಹಾಗೂ ಮಲ್ಲಾಪುರ ಹಿಂದುವಾಡದ ಸೂರಜ್ ಬಾಂದೇಕರ್, ವಿನಯ್ ನಾಯ್ಕ, ರೂಪೇಶ ಬಾಂದೇಕರ್ ಎಂಬುವವರನ್ನು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಾಯಿ ಬಿಟ್ಟಿದ್ದಾರೆ.
ಸಾಗರ್ ತಳಪನಕರ್ ಈ ಹತ್ಯೆಯ ಪ್ರಮುಖ ರೂವಾರಿ ಆಗಿದ್ದು ಕ್ಷುಲ್ಲಕ ಕಾರಣಕ್ಕೆ ಅನೂಜ್ನನ್ನು ಕೊಲೆ ಮಾಡಲು ನಿರ್ಧರಿಸಿ ಸ್ನೇಹಿತರೊಂದಿಗೆ ಪ್ಲ್ಯಾನ್ ಮಾಡಿ ಪಾರ್ಟಿಗೆ ಕರೆದಿದ್ದರು. ಅದರಂತೆ ರಾತ್ರಿ ಕೊಲೆ ಮಾಡಿ ನೀರಿಗೆ ಎಸೆದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಇದೀಗ ನಾಲ್ವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 22 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ಸಿಪಿಐ ವಿನಾಯಕ ಬಿಲ್ಲವ್, ಪಿಎಸ್ಐ ವಿಜಯಲಕ್ಷ್ಮಿ ಕಟಕದಂಡ ತಂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.