ಕಾರವಾರ : ಭಾರಿ ಮಳೆ ಬೆನ್ನಲ್ಲೇ ಅರಣ್ಯ ಪ್ರದೇಶಗಳಿಂದ ನದಿಗಳ ಮೂಲಕ ತೇಲಿ ಬಂದ ಕಸ ಕಡಲತೀರದುದ್ದಕ್ಕೂ ರಾಶಿಯಾಗತೊಡಗಿದೆ. ಇದು ಮೀನುಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಬಲೆ ಹಾಕಿದರೆ ಮೀನಿಗಿಂತ ಹೆಚ್ಚಾಗಿ ಕಸವೇ ಬಲೆಯಲ್ಲಿ ಕಂಡುಬರುತ್ತಿದ್ದು, ಕಿರಿಕಿರಿಯಾಗಿ ಪರಿಣಮಿಸಿದೆ.
ಹೌದು, ಕಳೆದ 15 ದಿನಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಮಾಣದ ಮಳೆ ಸುರಿದ ಪರಿಣಾಮ ನದಿಗಳು ತುಂಬಿ ಹರಿದಿದ್ದವು. ಈ ವೇಳೆ ನದಿಗಳಲ್ಲಿ ಅರಣ್ಯ ಪ್ರದೇಶಗಳಿಂದ ಮರಮಟ್ಟು, ದರಗೆಲೆ ಜೊತೆಗೆ ಎಲ್ಲೆಡೆಯಿಂದ ಪ್ಲಾಸ್ಟಿಕ್ ಸೇರಿದಂತೆ ಇತರೆ ಕಸ ತೇಲಿ ಬಂದಿತ್ತು. ಆದರೆ, ಹೀಗೆ ಬಂದ ಕಸ ಇದೀಗ ನಗರದ ರವೀಂದ್ರನಾಥ ಟ್ಯಾಗೋರ್ ಹಾಗೂ ಅಲಿಗದ್ದಾ ಕಡಲತೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಶಿಯಾಗಿದೆ. ಇದರಿಂದ ಸ್ಥಳೀಯ ಮೀನುಗಾರರು ಬಲೆ ಹಾಕಿದರೆ ಮೀನಿಗಿಂತ ಹೆಚ್ಚಾಗಿ ಕಸದ ರಾಶಿಯೇ ದೊರೆಯುವಂತಾಗಿದೆ.
"ಕಳೆದ ಎರಡು ತಿಂಗಳಿಂದ ಆಳ ಸಮುದ್ರ ಮೀನುಗಾರಿಕೆ ಬಂದ್ ಆದ ಕಾರಣ ಎಂಡಿ ಬಲೆ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲಾಗುತ್ತಿತ್ತು. ಆದರೆ, ಭಾರಿ ಮಳೆ ಕಾರಣದಿಂದಾಗಿ ಮೀನುಗಾರಿಕೆ ಸಾಧ್ಯವಾಗದೆ ಕುಳಿತಿದ್ದ ಮೀನುಗಾರರು, ಇದೀಗ ಮಳೆ ಕಡಿಮೆಯಾದ ಪರಿಣಾಮ ಮತ್ತೆ ಎಂಡಿ ಬಲೆ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆ ಮುಂದುವರಿಸಿದ್ದಾರೆ. ಆದರೆ, ಬಲೆ ತುಂಬ ಕಸದ ರಾಶಿಯೇ ಬರುತ್ತಿರುವುದು ಮೀನುಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಮಾತ್ರವಲ್ಲದೆ, ಕಸದ ರಾಶಿ ತುಂಬಿದ್ದರಿಂದ ಬಲೆ ಎಳೆಯುವ ಸಂದರ್ಭದಲ್ಲಿ ಹರಿದು ಹೋಗುತ್ತಿದ್ದು, ಸಾಕಷ್ಟು ನಷ್ಟವಾಗುತ್ತಿದೆ" ಎನ್ನುತ್ತಾರೆ ಮೀನುಗಾರ ಗುರುನಾಥ ಉಳ್ವೇಕರ್.
ಇನ್ನು, ಎಂಡಿ ಬಲೆ ಎಳೆಯಲು ಸುಮಾರು 20 ಕ್ಕೂ ಹೆಚ್ಚಿನ ಮೀನುಗಾರರು ಬೇಕು. ಅವರಿಗೆ ವೇತನ ನೀಡುವಷ್ಟು ಸಹ ಮೀನು ಲಭ್ಯವಾಗುತ್ತಿಲ್ಲ. ಬಲೆಗೆ ಎಲೆ, ಕಟ್ಟಿಗೆ ಜೊತೆಗೆ ಹತ್ತಾರು ಬಗೆಯ ತ್ಯಾಜ್ಯಗಳು ಸಿಲುಕುತ್ತಿದ್ದು, ಕಡಲ ತೀರದುದ್ದಕ್ಕೂ ಕಸದ ರಾಶಿಯೇ ಕಂಡುಬರುತ್ತಿದೆ. ಆದ್ದರಿಂದ ಕಡಲತೀರ ಸ್ವಚ್ಛಗೊಳಿಸಲು ನಗರಸಭೆ ಕ್ರಮ ಕೈಗೊಳ್ಳಬೇಕು ಎಂದು ಉಮೇಶ್ ಹರಿಕಂತ್ರ ಆಗ್ರಹಿಸಿದ್ದಾರೆ.
ಇದನ್ನೂ ಓದಿ : Deep Sea Fishing: ಆಗಸ್ಟ್ ತಿಂಗಳಿನಿಂದ ಆಳ ಸಮುದ್ರ ಮೀನುಗಾರಿಕೆ ಶುರು; ಉಡುಪಿಯಲ್ಲಿ ಮೀನುಗಾರರ ಸಿದ್ಧತೆ
"ಸಮುದ್ರಕ್ಕೆ ಅರಣ್ಯ ಪ್ರದೇಶಗಳಿಂದ ಎಲೆ ಸೇರಿದಂತೆ ಕಟ್ಟಿಗೆ ಬಂದು ಸೇರುವುದು ಸಾಮಾನ್ಯ. ಆದರೆ, ನಗರ ಪ್ರದೇಶದಿಂದ ಹರಿದು ಬರುವ ನೀರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಂದು ಕಡಲತೀರಕ್ಕೆ ಸೇರುತ್ತದೆ. ಇದು ಪರಿಸರಕ್ಕೂ ಮಾರಕ. ಆದರೆ, ಮಳೆಯ ಸಂದರ್ಭದಲ್ಲಿ ಅರಣ್ಯದಿಂದ ಬರುವ ಎಲೆಗಳು ಸಮುದ್ರಕ್ಕೆ ಸೇರುವುದರಿಂದ ಅದು ಕ್ರಮೇಣವಾಗಿ ಕೊಳೆತು ಸಮುದ್ರದ ಮೀನುಗಳಿಗೆ ಉತ್ತಮ ಆಹಾರವಾಗುತ್ತದೆ. ಇದರಿಂದ ಮೀನುಗಳ ಸಂಖ್ಯೆಯು ಹೆಚ್ಚುತ್ತದೆ. ಕಡಲತೀರಕ್ಕೆ ಬಂದು ಸೇರುವ ಎಲೆಗಳ ತ್ಯಾಜ್ಯ ಅಲೆಯ ರಭಸಕ್ಕೆ ಮತ್ತೆ ಸಮುದ್ರಕ್ಕೆ ಸೇರುತ್ತದೆ. ಇದು ಉತ್ತಮ ಗೊಬ್ಬರವೂ ಹೌದು. ಮೀನುಗಳಿಗಷ್ಟೇ ಆಹಾರವಲ್ಲದೆ ಸಮುದ್ರದ ಸೂಕ್ಷ್ಮ ಜೀವಿಗಳಿಗೂ ಇವು ಉತ್ತಮ ಆಹಾರವಾಗಿದ್ದು, ಸಮುದ್ರದ ಅನೇಕ ಮೀನುಗಳು ಸೂಕ್ಷ್ಮ ಜೀವಿಯನ್ನು ತಿಂದು ಬೆಳೆಯುತ್ತವೆ" ಎಂದು ನಗರದ ಕೇಂದ್ರಿಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ವಿಜ್ಞಾನಿ ಡಾ. ಮಹೇಶ ವಿ. ಮಾಹಿತಿ ನೀಡಿದ್ದಾರೆ.
ಒಟ್ಟಾರೆ, ಪ್ರಮುಖ ಕಡಲತೀರವಾದ ರವೀಂದ್ರನಾಥ ಟ್ಯಾಗೋರ್, ಅಲಿಗದ್ದಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ತೀರಕ್ಕೆ ಬಂದು ಬಿದ್ದಿದೆ. ಇದರ ಜೊತೆಗೆ ಕಟ್ಟಿಗೆ ಇನ್ನಿತರೆ ತ್ಯಾಜ್ಯಗಳು ಸೇರಿವೆ. ಇದನ್ನು ಸ್ವಚ್ಛಗೊಳಿಸಲು ನಗರಸಭೆ ಕ್ರಮ ಕೈಗೊಳ್ಳಬೇಕಾಗಿದೆ.