ಕಾರವಾರ: ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹೊನ್ನಾವರದ ಖಾಸಗಿ ಬಂದರು ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತೆ ಪೊಲೀಸ್ ಭದ್ರತೆಯಲ್ಲಿ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಂಡ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದು, ಹತ್ತಾರು ಯುವಕರು ಸಮುದ್ರಕ್ಕೆ ಹಾರಲು ಯತ್ನಿಸಿರುವ ಘಟನೆ ಇಂದು ನಡೆದಿದೆ.
ಹೊನ್ನಾವರ ತಾಲೂಕಿನ ಕಾಸರಕೊಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂ.ವೆಚ್ಚದಲ್ಲಿ ಹೆಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ನಿರ್ಮಿಸುತ್ತಿದೆ. ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಮಂಜೂರಿ ಮಾಡಿದೆ. ಕೆಲ ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭಿಸಿದ್ದ ಕಂಪನಿ ಸ್ಥಳೀಯರ ವಿರೋಧದಿಂದ ಸ್ಥಗಿತಗೊಳಿಸಿತ್ತು.
ಆದರೆ ಇಂದು ಬೆಳ್ಳಂಬೆಳಿಗ್ಗೆ ಮತ್ತೆ ಸಾವಿರಾರು ಪೊಲೀಸರ ಭದ್ರತೆಯಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳೆಗ್ಗೆಯಿಂದಲೇ ಸುರಿಯುವ ಮಳೆಯನ್ನು ಲೆಕ್ಕಿಸದೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಕಾಮಗಾರಿ ಸ್ಥಗಿತಗೊಳಿಸದ ಹಿನ್ನೆಲೆ ಕೆಲ ಯುವಕರು ಸಮುದ್ರಕ್ಕೆ ಹಾರಲು ಯತ್ನಿಸಿದ್ದಾರೆ. ಸದ್ಯ ಪೊಲೀಸರು ಹಾಗೂ ಸ್ಥಳೀಯರು ಯುವಕರನ್ನು ತಡೆದಿದ್ದು, ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.
ಇದನ್ನೂ ಓದಿ: ಸಾರಿಗೆ ನೌಕರರಿಗೆ ಬಿಗ್ ಶಾಕ್.. ವರ್ಷಪೂರ್ತಿ ಮುಷ್ಕರಕ್ಕೆ ಸರ್ಕಾರದ ಕೊಕ್ಕೆ