ಕಾರವಾರ: ನಗರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಿರ್ಮಾಣವಾಗುತ್ತಿರುವ ಕಾಂಪೌಂಡ್ ಹಾಗೂ ಠಾಗೋರ್ ಮೂರ್ತಿ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಇಂದು ಶಂಕುಸ್ಥಾಪನೆ ನೇರವೇರಿಸಿದರು.
ರವೀಂದ್ರನಾಥ ಠಾಗೋರ್ ಮೂರ್ತಿಗೆ ಮಾಲಾರ್ಪಣೆ ಮಾಡಿ, ಒಟ್ಟು 65 ಲಕ್ಷ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷ ಮೀಸಲಾತಿ ಸಂಬಂಧ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಸರ್ಕಾರ ಡಿವಿಷನ್ ಬೆಂಚ್ ಎದುರು ಮೇಲ್ಮನವಿ ಸಲ್ಲಿಸಲಿದೆ. ಎರಡು ವರ್ಷಗಳ ಕಾಲ ಚುನಾಯಿತ ಪ್ರತಿನಿಧಿಗಳಾದವರು ಕೊನೆಗೆ ಅಧಿಕಾರ ಸ್ಥಾಪಿಸಲಾಗದೇ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಉಚ್ಚನ್ಯಾಯಾಲಯ ಎರಡು ವರ್ಷದ ಬಳಿಕ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆ ನಡೆಸಲು ಅನುಮತಿ ನೀಡಿತ್ತು. ಸರ್ಕಾರದ ಮೀಸಲಾತಿಗೆ ಒಪ್ಪಿಗೆ ನೀಡಿ ಚುನಾವಣೆಯೂ ನಡೆದಿತ್ತು. ಆದರೆ ಅಧಿಕಾರಕ್ಕೇರಿದ ಎರಡೇ ದಿನದಲ್ಲಿ ನ್ಯಾಯಾಲಯ ಮೀಸಲಾತಿಗೆ ತಡೆ ನೀಡಿದೆ ಎಂದರು.
ವಿಶ್ವಕಂಡ ಮಹಾನ್ ನಾಯಕ ಠಾಗೋರ್ ಕಡಲತೀರಕ್ಕೆ ಕಾಲಿಟ್ಟ ನೆನಪು ಸದಾ ಉಳಿಯುವಂತಾಗಲು ಸರ್ಕಾರ ಮೊದಲಿದ್ದಂತೆ ಠಾಗೋರ್ ಮೂರ್ತಿ ಹಾಗೂ ಕಮಾನ್ ನಿರ್ಮಾಣ ಮಾಡಲು ಮುಂದಾಗಿದೆ. ಕೋವಿಡ್ ಕಾರಣದಿಂದಾಗಿ ಪ್ರವಾಸೋದ್ಯಮದ ಅಭಿವೃದ್ದಿಯಲ್ಲಿ ನಾವು ಸ್ವಲ್ಪ ಹಿಂದಿದ್ದೇವೆ. ಆದರೆ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ನೀತಿಯನ್ನು ತರಲಾಗುತ್ತಿದೆ. ಹೊಸ ಟೂರಿಸಂ ನೀತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೆ ಹೆಚ್ಚು ಲಾಭವಾಗಲಿದೆ ಎಂದರು.