ಭಟ್ಕಳ (ಉತ್ತರ ಕನ್ನಡ) : ಕೋವಿಡ್‌ನಿಂದಾಗಿ ತಾಲೂಕಿನ ಮುರ್ಡೇಶ್ವರದಲ್ಲಿ 6 ತಿಂಗಳಿನಿಂದ ಸ್ತಬ್ಧಗೊಂಡಿದ್ದ ಪ್ರವಾಸೋದ್ಯಮ ಚಟುವಟಿಕೆಗಳು ಪುನರಾರಂಭವಾಗಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಪ್ರತಿವರ್ಷ ಮಳೆಗಾಲದಲ್ಲೂ ದಿನನಿತ್ಯ 15 ರಿಂದ 20 ಸಾವಿರ ಪ್ರವಾಸಿಗರು ಭೇಟಿ ನೀಡುವುದು ಸಾಮಾನ್ಯವಾಗಿತ್ತು. ರಜಾ ದಿನಗಳಲ್ಲಂತೂ 1ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಿದ್ದರು.
ಆದರೆ, ಕೊರೊನಾ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಣೆಯಾದ ಬಳಿಕ ಮುರ್ಡೇಶ್ವರ ಜನರಿಲ್ಲದೆ ಖಾಲಿಯಾಗಿತ್ತು. ನಿರ್ಬಂಧಗಳು ಹಂತ ಹಂತವಾಗಿ ತೆರವಾದ ಬಳಿಕ ಮತ್ತೆ ಪ್ರವಾಸಿಗರು ಭೇಟಿ ನೀಡಲು ಆರಂಭಿಸಿದ್ದಾರೆ.
ಸೆ. 7ರಿಂದ ಮುರ್ಡೇಶ್ವರ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಅನ್ನಸಂತರ್ಪಣೆ ಹೊರತುಪಡಿಸಿ ಎಲ್ಲಾ ಸೇವೆಗಳು ನಡೆಯುತ್ತಿವೆ. ಸರ್ಕಾರದ ನಿಯಮದಂತೆ, ಭಕ್ತರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ಉಷ್ಣತೆ ಪರೀಕ್ಷಿಸಿ ದೇವಸ್ಥಾನದೊಳಗೆ ಬಿಡಲಾಗುತ್ತಿದೆ.
ಗರ್ಭಗುಡಿಗೆ ಒಂದು ಸಲಕ್ಕೆ ಐವರು ಭಕ್ತರನ್ನು ಮಾತ್ರ ದರ್ಶನಕ್ಕೆ ಬಿಡಲಾಗುತ್ತಿದೆ. ಈಗ ದಿನಕ್ಕೆ 6-7 ಸಾವಿರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಮಾಹಿತಿ ನೀಡಿದರು.
ಕೊರೊನಾ ವೈರಸ್‌ನ ಪರಿಣಾಮವು ಮುರ್ಡೇಶ್ವರದ ಚಿತ್ರಣವನ್ನೇ ಬದಲಿಸಿದೆ. ಪ್ರವಾಸಿಗರಿಂದ ತುಂಬಿರುತ್ತಿದ್ದ ಕಡಲತೀರ, ವಸತಿಗೃಹ, ಹೋಟೆಲ್‌ಗಳು ಈಗಲೂ ಚೇತರಿಕೆ ಕಂಡಿಲ್ಲ. ಕೆಲ ದಿನಗಳಿಂದ ನಿಧಾನವಾಗಿ ಪ್ರವಾಸಿಗರು ಬರುತ್ತಿದ್ದು, ಇಲ್ಲಿನ ಸಮುದ್ರ ತೀರದಲ್ಲೂ ಪ್ರವಾಸಿಗರು ಕಾಣಸಿಗುತ್ತಾರೆ.