ಶಿರಸಿ: ಫೆ. 8 ಮತ್ತು 9ರಂದು ತಾಲೂಕಿನ ಬನವಾಸಿಯ ಮಯೂರ ವರ್ಮ ವೇದಿಕೆಯಲ್ಲಿ ನಡೆಯಲಿರುವ ಕದಂಬೋತ್ಸವ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳು ಮತ್ತು ಆಮಂತ್ರಣ ಪತ್ರಿಕೆಯನ್ನು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಡುಗಡೆಗೊಳಿಸಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆದ ಕದಂಬೋತ್ಸವದ ಅಂತಿಮ ಹಂತದ ಪೂರ್ವ ತಯಾರಿ ಸಭೆಯಲ್ಲಿ ಪಾಲ್ಗೊಂಡು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಅವರು, ಇದು ಬರೀ ಸರ್ಕಾರಿ ಉತ್ಸವವಾಗದೆ ಜನಸಾಮಾನ್ಯರ ಉತ್ಸವವಾಗಬೇಕು. ಅಧಿಕಾರಿಗಳು ಇದಕ್ಕೆ ಜನಪ್ರತಿನಿಧಿಗಳು ಹಾಗೂ ಜನರ ಸಹಭಾಗಿತ್ವ ಪಡೆಯಬೇಕು ಎಂದರು.
ಫೆ. 6 ರಂದು ಕದಂಬ ಜ್ಯೋತಿ ಹೊರಡಲಿದ್ದು, 7ರಂದು ಕ್ರೀಡಾಕೂಟ ಹಾಗೂ 8, 9ರಂದು ಮಯೂರ ವರ್ಮ ವೇದಿಕೆಯಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಮ್ಯಾರಥಾನ್, ಸಾಂಸ್ಕೃತಿಕ ನಡಿಗೆ, ಫಲಪುಷ್ಪ ಪ್ರದರ್ಶನ, ಕೃಷಿ ಮೇಳ, ಜಾನುವಾರು ಮೇಳ, ಡಾಗ್ ಶೋ ಹಮ್ಮಿಕೊಳ್ಳಲಾಗಿದೆ. 8ರಂದು ಸಂಜೆ 7:30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗೌರವ ಉಪಸ್ಥಿತಿ ಇರಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಸಿ.ಟಿ.ರವಿ, ಸಂಸದ ಅನಂತ ಕುಮಾರ್ ಹೆಗಡೆ ಉಪಸ್ಥಿತರಿರುತ್ತಾರೆ. ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಜಿಪಂ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ.
ಫೆ. 8ರಂದು ಸಂಜೆ ಅರ್ಜುನ್ ಜನ್ಯ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ, ಪ್ರವೀಣ ಗೋಡ್ಖಿಂಡಿ ಅವರಿಂದ ಕೊಳಲು ವಾದನ ನಡೆಯಲಿದ್ದು, ರಕ್ಷಿತ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಫೆ. 9ರಂದು ಮುಂಬೈನ ಎಂ.ಜೆ.5 ತಂಡದಿಂದ ಆರ್ಕೆಸ್ಟ್ರಾ ಹಾಗೂ ರಿಕಿ ಕೇಜ್ ತಂಡದಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಜೊತೆಗೆ ಸ್ಥಳೀಯ ಕಲಾವಿದರಿಂದ ನೃತ್ಯ, ಸಂಗೀತ ನಡೆಯಲಿದೆ.