ಕಾರವಾರ : ಸೇತುವೆಯಿಲ್ಲದೇ ಹಳ್ಳ ದಾಟಲು ಪರದಾಡುತ್ತಿರುವ ಗ್ರಾಮಕ್ಕೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತೆರಳಿ ಇಂದು ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ.
ಹೊನ್ನಾವರ ತಾಲೂಕಿನ ಹೊಸಾಕುಳಿಯಲ್ಲಿ ಸೇತುವೆ ಇಲ್ಲದೇ ಹೊಳೆಯಲ್ಲೇ ನಡೆದು ಹೋಗಬೇಕಾದ ಸ್ಥಿತಿ ಇದೆ. ಇದೇ ಹಳ್ಳದಲ್ಲಿ ನಿತ್ಯ ಹರಸಾಹಸಪಟ್ಟು ವಿದ್ಯಾರ್ಥಿಗಳು, ಗ್ರಾಮಸ್ಥರು, ಗರ್ಭಿಣಿಯರು, ಖಾಯಿಲೆ ಬಿದ್ದವರನ್ನು ಹೊತ್ತುಕೊಂಡು ತೆರಳಬೇಕಾದ ಸ್ಥಿತಿ ಇದೆ.
ಆದರೆ, ಸಮಸ್ಯೆ ಬಗ್ಗೆ ಗ್ರಾಮದ ಶಾಲಾ ಬಾಲಕಿಯೊಬ್ಬಳು ವಿವರಿಸಿ ಸೇತುವೆ ನಿರ್ಮಿಸಿಕೊಡುವಂತೆ ಹೆಬ್ಬಾರ್‌ಗೆ ಕೈಮುಗಿದು ವಿಡಿಯೋ ಮೂಲಕ ಮನವಿ ಮಾಡಿದ್ದರು.
ಅದರಂತೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಹೊನ್ನಾವರಕ್ಕೆ ಆಗಮಿಸಿದ್ದ ವೇಳೆ ಹೆಬ್ಬಾರ್, ಇಂದು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಮಾತ್ರವಲ್ಲದೇ ಗ್ರಾಮಸ್ಥರಿಗೆ ಸಮಸ್ಯೆ ಬಗೆಹರಿಸುವ ಬಗ್ಗೆಯೂ ಆಶ್ವಾಸನೆ ನೀಡಿದ್ದಾರೆ.
ಶಾಸಕ ದಿನಕರ್ ಶೆಟ್ಟಿ ಕೂಡ ಕೆಲ ದಿನದ ಹಿಂದೆ ಭೇಟಿ ನೀಡಿ ಪರಿಶೀಲಿಸಿದ್ದರು. ತಮ್ಮ ಬಳಿಯಿರುವ ಅನುದಾನದಲ್ಲಿ₹2 ಕೋಟಿ ವೆಚ್ಚದಲ್ಲಿ ಮುಂದಿನ ಮೇ ಅಂತ್ಯದೊಳಗೆ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಶಾಸಕರು ಸಚಿವರ ಆಗಮನದಿಂದಾಗಿ ಇದೀಗ ಸೇತುವೆ ನಿರ್ಮಾಣವಾಗುವ ಭರವಸೆ ಮೂಡಿದಂತಾಗಿದೆ.