ಕಾರವಾರ: ಕೆಲ ಖಾಸಗಿ ಆಸ್ಪತ್ರೆಗಳು ಕೊವಿಡ್ ನೆಪದಲ್ಲಿ ಅನೇಕರಿಗೆ ಶೋಷಣೆ ಮಾಡುತ್ತಿರುವ ಬಗ್ಗೆ ಸಂದೇಶ ಹಾಗೂ ಸಂದೇಹ ಇದೆ. ಇಂತಹ ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಮಾನವೀಯತೆ ನೆಲೆಯಲ್ಲಿ ವರ್ತಿಸಬೇಕು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಜನರ ರಕ್ತ ಹೀರುವ ಕಾರ್ಖಾನೆಯಂತೆ ವರ್ತಿಸುವುದು ಸರಿಯಲ್ಲ. ಮಾನವೀಯತೆ ಬೇಕು. ಕೋವಿಡ್ ಆರಂಭಗೊಂಡಾಗ 5 ತಿಂಗಳ ಕಾಲ ಯಾವುದೇ ಖಾಸಗಿ ಆಸ್ಪತ್ರೆಯವರು ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಂಡಿರಲಿಲ್ಲ. ಸರಕಾರ ಪ್ರಬಲವಾಗಿ ನಿಂತ ಮೇಲೆ, ಆಗ ತಾವು ತೆಗೆದುಕೊಳ್ಳುತ್ತೇವೆ ಎಂದು ಮುಂದೆ ಬಂದರು. ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ನೆಪ ಮಾಡಿ ಶೋಷಣೆ ಮಾಡುತ್ತಿವೆ ಎನ್ನುವ ಸಂದೇಹ, ಸಂದೇಶ ಇದೆ. ಶೋಷಣೆ ಮಾಡುತ್ತಿರುವ ಆಸ್ಪತ್ರೆ ಎಚ್ಚರಿಕೆಯಿಂದ ಇರಬೇಕು ಎಂದರು.
ಶ್ರೀಮಂತರಿರಲಿ, ಬಡವರಿರಲಿ ಎಲ್ಲರ ಜೀವಕ್ಕೂ ಬೆಲೆ ಇದೆ. ಹಾಗಾಗಿ ಖಾಸಗಿ ಆಸ್ಪತ್ರೆ ಈ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ವಿನಂತಿ ಮಾಡಿದ ಅವರು, ಇಂತಹ ಆಸ್ಪತ್ರೆಗಳ ಮೇಲೆ ಸರ್ಕಾರ ಕಡಿವಾಣ ಹಾಕಲಿದೆ ಎಂದು ಎಚ್ಚರಿಸಿದರು.
ಓದಿ : ಕೋವಿಡ್ ನಿಯಮ ಉಲ್ಲಂಘನೆ: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ವಿರುದ್ಧ ಎಫ್ಐಆರ್