ಶಿರಸಿ(ಉತ್ತರ ಕನ್ನಡ): ರಾಜ್ಯದಲ್ಲಿ ದಲಿತ ಸಿಎಂ ಆಗಲೂ ಇನ್ನೂ ಕಾಲ ಕೂಡಿ ಬಂದಿಲ್ಲ, ಕಾಲ ಕೂಡಿ ಬಂದಾಗ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕಾರ್ಯಕ್ರಮವೊಂದರ ನಿಮಿತ್ತ ಶಿರಸಿಗೆ ಶನಿವಾರ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಮಾಡುವಂತೆ ನಾವು ಒತ್ತಾಯ ಮಾಡಬಹುದು, ಆದರೆ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ದಲಿತ ಸಿಎಂ ವಿಚಾರ ಇಲ್ಲ ಎಂದರು.
ಪಕ್ಷದ ಮುಖಂಡ ಬಿ ಕೆ ಹರಿಪ್ರಸಾದ್ ಅವರನ್ನು ಪಕ್ಷ ಕಡೆಗಣನೆ ಮಾಡಿದೆಯೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಹಿರಿಯರಿದ್ದಾರೆ ಅವರನ್ನು ಯಾರು ಕೆಳಗಿಳಿಸಲು ಆಗೋಲ್ಲ. ರಾಷ್ಟ್ರ ರಾಜಕಾರಣದಲ್ಲಿ ಸುಮಾರು 30 ವರ್ಷ ರಾಜಕೀಯ ಮಾಡಿದ್ದಾರೆ. ಅವರನ್ನು ಕಡೆಗಣಿಸಲು ಆಗೋಲ್ಲ, ಆ ರೀತಿಯ ವಾತಾವರಣ ನಮ್ಮ ಪಕ್ಷದಲ್ಲಿ ಇಲ್ಲ. ನಾವು ಅವರನ್ನು ಭೇಟಿ ಮಾಡಿ ಮಾತಕತೆ ನಡೆಸಿದ್ದೇವೆ. ಸಚಿವ ಸ್ಥಾನ ಅವರಿಗಷ್ಟೇ ಅಲ್ಲ, ಹಲವು ಹಿರಿಯ ನಾಯಕರಿಗೆ ನೀಡಿಲ್ಲ. ಅವಕಾಶ ಬಂದಾಗ ಎಲ್ಲರಿಗೂ ಸಚಿವ ಸ್ಥಾನ ಕೊಡುತ್ತಾರೆ ಎಂದು ಹೇಳೀದರು.
ಸದ್ಯ 25 ಮಂದಿ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ನಂತರ ಇನ್ನೂ ಅವಕಾಶ ಇದೆ. ಮುಂದೆ ಎಲ್ಲರಿಗೂ ಕೊಡುತ್ತಾರೆ. ಯಾರು ಅಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿ, ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಆಶಾಭಾವನೆ ಇದೆ. 24 ಗಂಟೆಗಳ ಕಾಲ ಕಾಯೋಣ ಎಂದರು.
ಇದನ್ನೂ ಓದಿ: ವೈಜ್ಞಾನಿಕವಾಗಿ ಜಾತಿ ಗಣತಿ ವರದಿ ಸಿದ್ಧಪಡಿಸಲಾಗಿದೆ, ವರದಿ ಬಂದ ಬಳಿಕ ತೀರ್ಮಾನ: ಸಿಎಂ ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ: ಇತ್ತೀಚಿಗೆ, ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗ್ತಾರೆ, ಡಿಸಿಎಂ ಆಗ್ತಾರೆ ಅನ್ನೋ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ್ದ ಸಚಿವ ಸತೀಶ್ ಜಾರಕಿಹೊಳಿ, ಸದ್ಯಕ್ಕೆ ಯಾವ ಚರ್ಚೆ ಇಲ್ಲ. ಎಲ್ಲರೂ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಅದೇನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಅಂತಹ ಚರ್ಚೆ ಈಗ ಸದ್ಯಕ್ಕೆ ನಡೆಯುತ್ತಿಲ್ಲ. ಚುನಾವಣೆ ಮುಗಿದ ಮೇಲೆ ಏನಾಗುತ್ತೆ ನೋಡಬೇಕು ಎಂದಿದ್ದರು.
ಸಿಎಂ ಬದಲಾವಣೆ ಆದರೆ ವಾಲ್ಮೀಕಿ ಸಮುದಾಯದವರಿಗೆ ಕೊಡಬೇಕು ಎನ್ನುವ ಪ್ರಶ್ನೆಗೆ, ಆ ರೀತಿ ಇಲ್ಲ ಅಂತಾ ನಾವು ಸ್ಪಷ್ಟ ಪಡಿಸಿದ್ದೇವೆ. ಸಮುದಾಯದಿಂದ ಬೇಡಿಕೆ ಇಡುತ್ತಾರೆ. ಆದರೆ ಪಕ್ಷದ ತೀರ್ಮಾನ ಬೇರೆ ಇರುತ್ತೆ ಎಂದು ಹೇಳಿದ್ದರು.