ಕಾರವಾರ(ಉತ್ತರಕನ್ನಡ): ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕುಮಟಾ - ಸಿದ್ದಾಪುರ ಮುಖ್ಯ ರಸ್ತೆಯಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಈ ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲದ ಕಾರಣ ಅನಾರೋಗ್ಯಕ್ಕೆ ಒಳಗಾದವರನ್ನು ಒಳಗೊಂಡಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತಲೆಯ ಮೇಲೆಯೇ ಹೊತ್ತು ನಡೆಯಬೆಕಾದ ಪರಿಸ್ಥಿತಿ ಇದೆ.
ರಸ್ತೆ ಸಮಸ್ಯೆ ಕಾರಣಕ್ಕೆ ಗ್ರಾಮದ ಬಹುತೇಕ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಂದ ಬೇಸತ್ತು ಹೋರಾಟ ನಡೆಸಿದ ಹಿನ್ನೆಲೆ, 2019ರಲ್ಲಿ ಅಂದಿನ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಗ್ರಾಮ ವಾಸ್ತವ್ಯ ನಡೆಸಿ ಸ್ಥಳೀಯರ ಸಮಸ್ಯೆ ಆಲಿಸಿದ್ದರಾದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಪಿಂಚಣಿ, ಶಾಲೆಗೆ ಸುಣ್ಣ ಬಣ್ಣ ಹೀಗೆ ಸಣ್ಣಪುಟ್ಟ ಸಮಸ್ಯೆಗಳು ಮಾತ್ರ ಬಗೆಹರಿದಿತ್ತು.
ಈ ಬಾರಿ ಮತ್ತೆ ಈಗಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತೆರಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದರು. ಒಂದಿಷ್ಟು ಸಮಸ್ಯೆಗಳಿಗೆ ಮುಕ್ತಿ ದೊರಕಿಸಿದ್ದರು. ಅಲ್ಲದೇ ಮೂಲ ಸಮಸ್ಯೆಯಾಗಿರುವ ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ಈವರೆಗೂ ಯಾವುದೇ ಯೋಜನೆ ಜಾರಿಯಾಗಿಲ್ಲ. ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಮಗೆ ಅತಿ ಅಗತ್ಯವಿರುವ ರಸ್ತೆ ನಿರ್ಮಿಸಿಕೊಡಿ ಎಂದು ಸ್ಥಳಿಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಗ್ರಾಮದಲ್ಲಿ ಸುಮಾರು 56 ಮನೆಗಳಿದ್ದು ಬಹುತೇಕರು ರೈತರಾಗಿದ್ದಾರೆ. ಹೆಚ್ಚಿನವರಲ್ಲಿ ಸ್ವಂತ ಗಾಡಿಯೂ ಇಲ್ಲ. ಮಳೆಗಾಲದಲ್ಲೂ ನಡೆದೇ ಸಾಗಬೇಕು. ಅದೇಷ್ಟೋ ಮನೆಗಳಲ್ಲಿ ಸಂಬಂಧ ಬೆಳೆಸಲು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಮದುವೆಗೆ ಬಂದ ಮಕ್ಕಳ ಮದುವೆ ಮಾಡಲಾಗದ ಪರಿಸ್ಥಿತಿ ಇದೆ.
ಗ್ರಾಮ 7 ಕಿ.ಮೀ ವಿಸ್ತಾರದಲ್ಲಿದ್ದರೂ ತುರ್ತಾಗಿ 3 ಕಿ.ಮೀ ರಸ್ತೆ ನಿರ್ಮಾಣ ಮಾಡಿದರೆ ಗ್ರಾಮಸ್ಥರು ಸುಲಭವಾಗಿ ಸಂಚಾರ ಮಾಡಲು ಸಾಧ್ಯವಿದೆ. ಇಷ್ಟಾದರೂ ಜನಪ್ರತಿನಿಧಿಗಳು ಅನುದಾನ ಮಂಜೂರು ಮಾಡಿಸಲು ಮುಂದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಸಮಾಧಾನ. ಈ ಬಗ್ಗೆ ಸ್ಥಳೀಯ ಶಾಸಕರಾದ ದಿನಕರ ಶೆಟ್ಟಿ ಬಳಿ ಕೇಳಿದ್ರೆ, ಗ್ರಾಮ ಅರಣ್ಯ ಪ್ರದೇಶದಲ್ಲಿದ್ದು ಈಗಾಗಲೇ ಸ್ವಲ್ಪ ಅನುದಾನ ನೀಡಿದ್ದೇನೆ. ಮುಂದೆ ಈ ಬಗ್ಗೆ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.