ಶಿರಸಿ: ಶೀಘ್ರದಲ್ಲೇ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ಒಳ್ಳೆಯವರನ್ನು ಆಯ್ಕೆ ಮಾಡಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತದಾರರಿಗೆ ಸಲಹೆ ನೀಡಿದರು.
ಸೋಮವಾರ ಜಿಲ್ಲೆಯ ಸಿದ್ದಾಪುರ ತಾಲೂಕಿನ ವಂದಾನೆಯಲ್ಲಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮ್ಮ ಊರಿನಲ್ಲಿ ಯಾರು ಅಭಿವೃದ್ಧಿ ಪರ ಇದ್ದಾರೆ ಅನ್ನೋದು ನಿಮಗೆ ಗೊತ್ತಿದೆ. ಯಾರೇ ಆಯ್ಕೆ ಆದ್ರೂ ಕೂಡ ಅಂತಿಮವಾಗಿ ಏನು ಮಾಡತ್ತಾರೆ ಅನ್ನೋದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನೇನು ಅಧಿವೇಶನ ಪ್ರಾರಂಭವಾಗುತ್ತೆ. ನಾನು ಹೇಗಿದ್ರೂ ಸಭಾಧ್ಯಕ್ಷನಿದ್ದೇನೆ. ಅಲ್ಲಿ ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ಪರವಾಗಿ ಅನುದಾನವನ್ನು ಕೇಳೋ ಅವಕಾಶ ನನಗಿದೆ. ಉತ್ತಮ ಕೆಲಸಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ಹೇಳಿದರು.
ಇದನ್ನು ಓದಿ: ಇಂದು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 150 ಸ್ಥಾನಕ್ಕೆ ಮತದಾನ
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗಡೆ, ಜಿಲ್ಲೆಯಲ್ಲಿ 300 ಕೋಟಿ ರೂ.ಗೂ ಹೆಚ್ಚು ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಹೆಜ್ಜೆ ಇಡುತ್ತಿದೆ. ರಾಜ್ಯ ಸರ್ಕಾರ ಕೂಡ ಇದಕ್ಕೆ ಕೈಜೋಡಿಸಿದೆ. ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಬೇಕು. ಕೈಗಾರಿಕೆಗಳನ್ನು ನಿರ್ಮಿಸಬೇಕು. ಉದ್ಯೋಗಾವಕಾಶ ಹೆಚ್ಚಬೇಕು ಅನ್ನೋ ದೃಷ್ಟಿಯಿಂದ ಮುತುವರ್ಜಿ ವಹಿಸಿದ್ದೇವೆ. ಅಭಿವೃದ್ಧಿ ಅಂದ್ರೆ ರಸ್ತೆ, ನೀರು ಇಷ್ಟೇ ಅಲ್ಲ. ಇದರ ಹೊರತಾಗಿ ಹೊಸ ಆಯಾಮ ಇದೆ ಎನ್ನುವ ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.