ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ಮುಗಿದಿದ್ದು, ಮತಗಟ್ಟೆಗಳಿಂದ ಇವಿಎಂ ಮತ ಯಂತ್ರಗಳನ್ನು ಸುರಕ್ಷಿತವಾಗಿ ತಂದು ಜಮಾವಣೆ ಮಾಡಲಾಗುತ್ತಿದೆ.
ಕ್ಷೇತ್ರವಾರು ನಿಗದಿಪಡಿಸಿರುವ ಡಿಮಸ್ಟರಿಂಗ್ ಸೆಂಟರ್ಗಳಿಗೆ ಮತ ಯಂತ್ರಗಳನ್ನು ಮೇಲ್ವಿಚಾರಕರು ತಂದು ಜಮಾವಣೆ ಮಾಡುತ್ತಿದ್ದಾರೆ. ಮಳೆಯಿಂದಾಗಿ ಗ್ರಾಮೀಣ ಭಾಗದಿಂದ ಬರುವ ಅಧಿಕಾರಿಗಳಿಗೆ ಸ್ವಲ್ಪ ಅಡಚಣೆಯಾಗಿದೆ. ಲೋಕಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲರ ಹಣೆಬರಹ ಈಗ ಮತಯಂತ್ರಗಳಲ್ಲಿ ಭದ್ರವಾಗಿದೆ.
74.07ರಷ್ಟು ಮತದಾನ:
ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು ಶೇ. 74.07ರಷ್ಟು ಮತದಾನವಾಗಿದೆ. ಬೆಳಗಾವಿಯ ಎರಡು ಮತ್ತು ಉತ್ತರಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿರಸಿಯಲ್ಲಿ ಅತಿ ಹೆಚ್ಚು 78.09ರಷ್ಟು ಹಾಗೂ ಖಾನಾಪುರದಲ್ಲಿ 70.72ರಷ್ಟು ಮತದಾನವಾಗಿದೆ. ಬೆಳಗ್ಗೆಯಿಂದಲೇ ಬಿರುಸಿನಿಂದ ನಡೆದ ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಮಟ್ಟಿಗೆ ನಿಧಾನಗತಿಯಲ್ಲಿ ಸಾಗಿತ್ತು. ಬಳಿಕ ಸಂಜೆ ಮತ್ತೆ ಮತದಾನ ಬಿರುಸುಗೊಂಡು ಕೆಲ ಭಾಗಗಳಲ್ಲಿ ಬಾರಿ ಮಳೆಯಾದ ಕಾರಣ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು.
ಇನ್ನು ಸಂಜೆ 6 ಗಂಟೆವರೆಗೆ ಮಾತ್ರ ಮತಗಟ್ಟೆ ಪ್ರವೇಶಿಸಲು ಅವಕಾಶ ನೀಡಿದ್ದು, ಬಳಿಕ ಮತಗಟ್ಟೆಯಲ್ಲಿದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವಧಿ ಮುಗಿದ ಬಳಿಕ ಬಂದವರನ್ನು ವಾಪಸ್ ಕಳುಹಿಸುತ್ತಿರುವುದು ಕಂಡುಬಂತು.