ಕಾರವಾರ: ಶಾಲೆ ಬಳಿ ಚಿರತೆಯೊಂದು ಪ್ರತ್ಯಕ್ಷವಾದ ಹಿನ್ನೆಲೆ ಆತಂಕ ಸೃಷ್ಟಿಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಕೆಕ್ಕಾರ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಕೆಕ್ಕಾರ ನಂ.2 ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅವರಣದಲ್ಲಿ ಹಾಗೂ ಹೊರವಲಯದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದನ್ನು ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಸ್ಥಳೀಯರೊಬ್ಬರು ರಾತ್ರಿ ಬೈಕ್ನಲ್ಲಿ ಹೋಗುತ್ತಿರುವಾಗ ತಮ್ಮ ಮೊಬೈಲ್ನಲ್ಲಿ ಫೋಟೋ ಸೆರೆ ಹಿಡಿದಿದ್ದಾರೆ. ಚಿರತೆ ಅಡ್ಡ ಬಂದಿದ್ದರಿಂದ ಗ್ರಾಮದ ಆಸುಪಾಸು ಚಿರತೆ ಇರುವುದು ಖಚಿತವಾಗಿದೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಹೆಜ್ಜೆ ಗುರುತಿನ ಶೋಧಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಸಂಡೂರು ಎನ್ಎಂಡಿಸಿ ಬಳಿ ಚಿರತೆ ಪ್ರತ್ಯಕ್ಷ.. ವಿಡಿಯೋ
ಕೆಕ್ಕಾರ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಡಿಕೊಂಡಿದೆ. ಈ ವೇಳೆ ಅರಣ್ಯದಿಂದ ಬೇರೆಡೆ ಸಂಚರಿಸುವಾಗ ಜನರ ಕಣ್ಣಿಗೆ ಬಿದ್ದಿದೆ. ಜನರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಆದರೂ ಚಿರತೆ ಕಾಣಿಸಿಕೊಂಡಿದ್ದರಿಂದ ಜಮೀನುಗಳಿಗೆ ತೆರಳುವಾಗ ರೈತರು ನಿರ್ಲಕ್ಷ್ಯ ವಹಿಸಬಾರದು. ರಾತ್ರಿ ಹಾಗೂ ಹಗಲಿನಲ್ಲಿ ಒಂಟಿಯಾಗಿ ತಿರುಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ಮತ್ತು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.