ಕಾರವಾರ (ಉ.ಕ): ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನ ಆಚರಿಸಲು ಕೊನೆ ಕ್ಷಣದಲ್ಲಿ ಅವಕಾಶ ಸಿಗದೆ ರಸ್ತೆ ಬದಿ ಆಚರಣೆ ಮಾಡಲಾಗಿದೆ. ಡಿ.3ರಂದು ವಕೀಲರ ದಿನಾಚರಣೆ ಆಚರಿಸಲಾಗುತ್ತದೆ.
ಆದರೆ, ಅಂದು ಸಾರ್ವತ್ರಿಕ ರಜೆ ಇದ್ದ ಹಿನ್ನೆಲೆ ಬಾರ್ ಅಸೋಸಿಯೇಷನ್ ಸೂಚನೆಯಂತೆ ಅಂಕೋಲಾ ತಾಲೂಕು ವಕೀಲರ ಸಂಘ ಡಿ.4ರಂದು ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆಗೆ ಮುಂದಾಗಿದ್ದರು.
ಆದರೆ, ಕೊನೆ ಕ್ಷಣದಲ್ಲಿ ಆವರಣದೊಳಗೆ ಆಚರಣೆಗೆ ಅವಕಾಶ ಸಿಗದ ಹಿನ್ನೆಲೆ ರಸ್ತೆ ಬದಿ ಕುರ್ಚಿ ಹಾಕಿ ಅಲ್ಲಿಯೇ ಆಚರಣೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಹಿರಿಯ ವಕೀಲ ಉದಯ ಭಟ್, ವಕೀಲರ ದಿನಾಚರಣೆ ಒಂದು ದಿನ ತಡವಾಗಿ ಆಚರಣೆ ಮಾಡಲು ನಿರ್ಧರಿಸಿದ್ದೆವು.
ಆದರೆ, ನ್ಯಾಯಾಲಯದ ಸಂಕೀರ್ಣದಲ್ಲಿ ಅವಕಾಶ ಸಿಕ್ಕಿಲ್ಲ. ನಮ್ಮ ಸಂಘದ ಸಭಾಂಗಣವನ್ನು ಹೆಚ್ಚುವರಿ ನ್ಯಾಯಾಲಯಕ್ಕೆ ಅವಶ್ಯವಿರುವ ಕಾರಣ ಬಿಟ್ಟುಕೊಡಲಾಗಿದೆ.
ಆದರೆ, ಉಚ್ಚ ನ್ಯಾಯಾಲಯದ ಸುತ್ತೋಲೆಯ ಪ್ರಕಾರ ನ್ಯಾಯಾಲಯದ ಆವರಣದಲ್ಲಿ ದಿನ ಆಚರಿಸದಂತಾಗಿದೆ. ಇದರಿಂದಾಗಿ ನಮಗೆ ತೀವ್ರ ನೋವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ, ವಕೀಲ ಮಿತ್ರರು ನ್ಯಾಯಾಲಯದ ಆವರಣದೊಳಗೆ ಕಾರ್ಯಕ್ರಮಕ್ಕೆ ಅವಕಾಶ ದೊರೆಯದಿದ್ದರೂ, ನಮ್ಮನ್ನು ಬೀದಿಯಲ್ಲಿ ಕೂರಿಸಿ ಕಾರ್ಯಕ್ರಮ ಹಮ್ಮಿಕೊಂಡು ಸನ್ಮಾನಿಸಿರುವುದು ಅರ್ಥಪೂರ್ಣ.
ವಕೀಲರ ಕಟ್ಟಡ ನಿರ್ಮಾಣವಾಗುವವರೆಗೆ ಉಚ್ಚ ನ್ಯಾಯಾಲಯದಲ್ಲಿಯೂ ರಿಟ್ ಅರ್ಜಿ ಸಲ್ಲಿಸುತ್ತೇನೆ. ಇದು ವ್ಯವಸ್ಥೆಗೆ ಕರಿನೆರಳು ಎಂದು ಅಸಮಾಧಾನ ವ್ಯಕ್ತಪಡಿಸಿದರು.