ಭಟ್ಕಳ : ಕೋವಿಡ್-19 ಮಹಾಮಾರಿಯಿಂದಾಗಿ ಸಾವಿರಾರು ಕುಟುಂಬಗಳು ಅನ್ನಕಾಣದೆ ಬೀದಿಪಾಲಾಗುತ್ತಿವೆ. ಲಾಕ್ಡೌನ್ ಸಮಯದಲ್ಲಿ ಇದು ಸೃಷ್ಠಿಸಿದ್ದ ಸಮಸ್ಯೆಗಳು ಒಂದೆಡೆಯಾದ್ರೆ, ಅನ್ಲಾಕ್ ನಂತರ ಮತ್ತಷ್ಟು ಸಮಸ್ಯೆಗಳನ್ನು ಉಲ್ಬಣಿಸುವಂತೆ ಮಾಡಿದೆ.
ಉದ್ಯೋಗದಾತರೇ ಉದ್ಯೋಗ ಕಳೆದುಕೊಂಡು ಹೊಸ ಉದ್ಯೋಗ ಕಂಡುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕಲು ಬವಣೆ ಪಡುತ್ತಿದ್ದಾರೆ. ದೇಶದಲ್ಲಿ ಅನ್ಲಾಕ್ ಘೋಷನೆಯಾದಂದಿನಿಂದ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿದ್ದ ರಿಕ್ಷಾಚಾಲಕರು, ತರಕಾರಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಈಗ ಒಂದು ಹಂತಕ್ಕೆ ಬಂದು ನಿಂತುಕೊಂಡಿದ್ದಾರೆ. ಆದರೆ, ಕೆಲ ವೃತ್ತಿಪರರು ಈಗ ಸಂಪೂರ್ಣ ಬೀದಿಗೆ ಬಂದಿದ್ದಾರೆ. ವಕೀಲರು, ಖಾಸಗಿ ಶಾಲಾ ಶಿಕ್ಷಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಏನೆಲ್ಲ ಹರಸಾಹಸ ಮಾಡುತ್ತಿದ್ದರೂ, ಅವರ ಹೊಟ್ಟೆಗೆ ಒಂದು ಹೊತ್ತಿನ ಅನ್ನ ಸಿಗುತ್ತಿಲ್ಲ.
ಪ್ರತಿಯೊಬ್ಬರಿಗೂ ಕೂಡ ತಮ್ಮ ವೃತ್ತಿ ಗೌರವ ಮುಖ್ಯ. ಒಂದು ಕಾಲದಲ್ಲಿ ವೈಟ್ ಕಾಲರ್ ಜಾಬ್ ಮಾಡುವವರು, ರೈತರನ್ನು ಕಂಡರೆ ನಿರ್ಲಕ್ಷ್ಯ ಮಾಡುತ್ತಿದ್ದ ಕಾಲವಿತ್ತು. ಹಲವರು ತಾವು ರೈತನ ಮಗ ಎಂದು ಹೇಳಿಕೊಳ್ಳೂವುದಕ್ಕೂ ಕೂಡ ಹಿಂಜರಿಯುತ್ತಿದ್ದುದು ಈಗ ಇತಿಹಾಸ. ಇಂದು ರೈತನ ಮಗ ಅಂದರೆ ಅದುವೇ ಹೆಮ್ಮೆ ಎಂದುಕೊಂಡವರೇ ಹೆಚ್ಚು. ಇದಕ್ಕೇ ಹೇಳುವುದು ಕಾಲಾಯ ತಸ್ಮೈ ನಮಃ.. ಕೆಲವರು ಸ್ವಲ್ಪ ಓದಿದ್ರೆ ಸಾಕು ನಾನು ದೊಡ್ಡ ಅಧಿಕಾರಿಯಾಗಬೇಕು, ಸರ್ಕಾರಿ ಇಲ್ಲವೇ ಬ್ಯಾಂಕ್ ಉದ್ಯೋಗಿಯಾಗಬೇಕು. ವೈಟ್ ಕಾಲರ್ ಜಾಬ್ ಹಿಡಿದು ಎಲ್ಲರೆದುರು ಅಡ್ಡಾಡಬೇಕು ಎಂದು ಹಂಬಲಿಸುತ್ತಾರೆ. ತಮ್ಮ ಮನೆಯಲ್ಲಿ ಎಷ್ಟೇ ಕೃಷಿ ಜಮೀನಿದ್ದರೂ ಸಹ, ಅತ್ತ ಕಡೆ ಮುಖ ಮಾಡಿದ್ರೆ ತನ್ನ ಘನೆತೆಗೇನಾದ್ರೂ ಕುಂದು ಬರಬಹುದು ಎಂದು ತಿಳಿದುಕೊಳ್ಳುವವರೇ ಹೆಚ್ಚು. ಆದರೆ, ಭಟ್ಕಳದ ಶಿರಾಲಿ ಮಾವಿನಕಟ್ಟೆಯ ನಿವಾಸಿ ಸದಾನಂದ ಜೆ. ನಾಯ್ಕ ಇವರು ಇದಕ್ಕೆ ವಿರುದ್ಧ.
ತಾವು ಎಲ್ಎಲ್ಬಿ ಪದವಿ ಮುಗಿಸಿ ವಕೀಲಿ ವೃತ್ತಿ ಮಾಡುತ್ತಿದ್ದರೂ ಸಹ ತಮ್ಮ ಮೂಲ ಕಸುಬು ಕೃಷಿಯನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತಲೇ ಬಂದಿದ್ದಾರೆ. ಪ್ರತಿ ವರ್ಷವೂ ಕೂಡಾ ತಮ್ಮ ಗದ್ದೆಗಳಲ್ಲಿ ಭತ್ತವನ್ನು ಬಿತ್ತಿ, ಸಸಿಗಳನ್ನು ತಯಾರು ಮಾಡುವುದರಿಂದ ಹಿಡಿದು, ಗದ್ದೆ ನಾಟಿ, ಕಳೆ ನಿರ್ವಹಣೆ ಹಾಗೂ ಕಟಾವು ಮಾಡುವ ತನಕವೂ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಇವರು ತಮ್ಮ ವಕೀಲಿ ವೃತ್ತಿಯನ್ನು ಕೂಡಾ ಶೃದ್ಧೆಯಿಂದ ಮಾಡುತ್ತಾ ಬಂದಿದ್ದಾರೆ. ಈ ವರ್ಷ ಮಾತ್ರ ಕೊರೊನಾ ಲಾಕ್‍ಡೌನ್‍ನಿಂದಾಗಿ ಕೋರ್ಟ್ ಕಲಾಪಕ್ಕೆ ರಜೆ ಸಾರಿದ್ದರಿಂದ ಇವರು ಪೂರ್ಣಾವಧಿ ಕೃಷಿಕರಾಗಿದ್ದಾರೆ. ಗದ್ದೆ ನಾಟಿ ಕಾರ್ಯ ಮುಗಿದು ಕಳೆ ನಿರ್ವಹಣೆ ಕೂಡ ಆಗಿದ್ದರೆ, ಸದ್ಯ ತಮ್ಮ ಮನೆಯ ಸುತ್ತಲೂ ಇರುವ ಜಾಗದಲ್ಲಿ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ.
ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿರುವ ಇವರಿಗೆ ಕೃಷಿ ಕಾರ್ಯ ಮಾತ್ರ ಅಚ್ಚುಮೆಚ್ಚು. ಬ್ಯಾಂಕ್ ಉದ್ಯೋಗಿಯಾಗಿರುವ ಇವರ ಸಹೋದರ ಕೂಡ ಇವರಿಗೆ ಕೃಷಿ ಕಾರ್ಯಕ್ಕೆ ಸಹಕರಿಸುತ್ತಿದ್ದು, ಇವರ ತಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ್ರೂ ಕೂಡ ಕೃಷಿಯಿಂದ ನಿವೃತ್ತರಾಗಿಲ್ಲ. ಇವರ ಕುಟುಂಬ ಸಂಪೂರ್ಣ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದು ಉತ್ತಮ ಕೃಷಿಕರಾಗಿದ್ದಾರೆ.
ಚಿಕ್ಕಂದಿನಿಂದಲೂ ನನಗೆ ಕೃಷಿಯಲ್ಲಿ ವಿಶೇಷ ಆಸಕ್ತಿ ಇತ್ತು. ನಾನು ಕೃಷಿ ಕುಟುಂಬದಿಂದ ಬಂದವನು. ವೃತ್ತಿಯಲ್ಲಿ ವಕೀಲನಾದ್ರೂ ನಾನು ಕೃಷಿಯಿಂದ ಹೊರಗುಳಿಯಲು ಸಾಧ್ಯವಿಲ್ಲ. ಕೃಷಿಗೆ ನನ್ನದು ಮೊದಲ ಆದ್ಯತೆ. ಓದಿದ್ದನ್ನೇ ಕೆಲಸ ಮಾಡಬೇಕೆಂದಿನಿಲ್ಲ. ಕೃಷಿ ಭೂಮಿಯಲ್ಲಿ ತೊಡಗಿ ವ್ಯವಸಾಯ ಮಾಡುವುದರಿಂದ ಹೆಚ್ಚು ನೆಮ್ಮದಿಯಿಂದ ಇರಬಹುದು. ಕೃಷಿಯಲ್ಲಿ ಜೀವನ ಪರಿಪೂರ್ಣ ಅನಿಸುತ್ತದೆ ಎನ್ನುತ್ತಾರೆ ಸದಾನಂದ.
ಇತ್ತೀಚಿನ ಕೆಲ ಯುವ ತಲೆಮಾರು ಕೃಷಿ ಕಡೆ ವಾಲುತ್ತಿರುವುದು ಆಶಾದಾಯಕ ಬೆಳವಣಿಗೆ. ಕೃಷಿಯಲ್ಲಿ ತೊಡಗಿಸಿಕೊಂಡು ನವ ಭಾರತಕ್ಕೆ ಕೃಷಿಯೇ ಇನ್ನೂ ಹೆಚ್ಚಿನ ಬೆನ್ನೆಲುಬಾಗಲಿ ಎಂಬುದು ನಮ್ಮ ಹಾರೈಕೆ.