ಶಿರಸಿ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಉತ್ತರ ಕನ್ನಡ ಜಿಲ್ಲೆಯ ಯಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಭೈರವೇಶ್ವರನ ದರ್ಶನ ಪಡೆಯಲು ಪ್ರವಾಸಿಗರು 2 ಕಿಲೋಮೀಟರ್ಗೂ ಅಧಿಕ ದೂರ ಕಾಲ್ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿಯಿದೆ.
ಗೋಕರ್ಣ-ಶಿರಸಿ ರಾಜ್ಯ ಹೆದ್ದಾರಿಯಿಂದ ಯಾಣಕ್ಕೆ ಕೇವಲ 3 ಕಿ.ಮೀ ಅಂತರವಿದೆ. ಆದ್ರೆ ಹದೆಗೆಟ್ಟ ರಸ್ತೆಯಿಂದಾಗಿ ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ನಡೆದುಕೊಂಡೇ ಹೋಗುವಂತಾಗಿದೆ. ಜೊತೆಗೆ ಇಕ್ಕಟ್ಟಾದ ರಸ್ತೆಯಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.
2002ರಲ್ಲಿ ಎಡಿಬಿ ಯೋಜನೆಯಿಂದ ಯಾಣದ ಮೂರು ಕಿಲೋಮೀಟರ್ ರಸ್ತೆ ಡಾಂಬರೀಕರಣಕ್ಕೆಂದು 2 ಲಕ್ಷ ರೂಪಾಯಿ ಮಂಜೂರಾಗಿತ್ತು. ಆ ಬಳಿಕ ಈ ರಸ್ತೆಗೆ ಯಾವುದೇ ವಿಶೇಷ ಅನುದಾನಗಳು ಬಿಡುಗಡೆಗೊಂಡಿಲ್ಲ. ಹೀಗಾಗಿ ದಶಕಗಳ ಹಿಂದಿನ ಡಾಂಬರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜೊತೆಗೆ ರಸ್ತೆಯ ಎರಡು ಇಕ್ಕೆಲಗಳಲ್ಲಿ ಮರಗಳು ಬಾಗಿದ್ದು, ಪೊದೆಗಳಿಂದ ತುಂಬಿ ದುರ್ಗಮ ರಸ್ತೆಯಾಗಿ ಬದಲಾಗಿದೆ. ಅಲ್ಲದೆ ಯಾಣದಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಹೀಗಾಗಿ ಸರ್ಕಾರ ಕೂಡಲೇ ರಸ್ತೆ ಅಭಿವೃದ್ಧಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.