ಕಾರವಾರ: ಅಲ್ಲಿ ಜನಜಾತ್ರೆಯೇ ಸೇರಿತ್ತು. ಮಹಿಳೆಯರು, ಮಕ್ಕಳು, ಪುರುಷರೆನ್ನದೆ ಎಲ್ಲರೂ ಯುದ್ಧೋಪಾದಿಯಲ್ಲಿ ನೀರಿಗಿಳಿದಿದ್ದರು. ಮೈ ಕೈ ಕೆಸರಾಗುತ್ತಿರುವುದನ್ನು ಲೆಕ್ಕಿಸದೆ ಒಬ್ಬರಿಗಿಂತ ಇನ್ನೊಬ್ಬರು ಪೈಪೋಟಿಯಲ್ಲಿ ಮತ್ಸ್ಯ ಬೇಟೆ ನಡೆಸಿದ್ದರು.
ಇದು ಸಾಂಪ್ರದಾಯಿಕ ಮತ್ಸ್ಯ ಬೇಟೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಕಾಳಿ ನದಿ ಹಿನ್ನೀರಿನಲ್ಲಿ ಮೀನಿನ ಬೇಟೆ ನಡೆದಿತ್ತು. ಸದಾ ಮೊಬೈಲ್ ಹಿಡಿದು ಕಾಲ ಕಳೆಯುತ್ತಿದ್ದ ಯುವಕ, ಯುವತಿಯರು, ಇಳಿವಯಸ್ಸಿನ ಅಜ್ಜ-ಅಜ್ಜಿಯಂದಿರು ಉತ್ಸಾಹದಿಂದಲೇ ಮತ್ಸ್ಯ ಬೇಟೆಯಲ್ಲಿ ತೊಡಗಿಕೊಂಡಿದ್ದು ವಿಶೇವಾಗಿತ್ತು.
ಮೀನಿನ ಬೇಟೆಯ ಸುದ್ದಿ ತಿಳಿದು ಬೆಳಿಗ್ಗೆಯಿಂದಲೇ ದೌಡಾಯಿಸಿದ್ದ ಕಿನ್ನರ, ಸಿದ್ದರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬಲೆ, ಚೀಲ, ಬುಟ್ಟಿಗಳೊಂದಿಗೆ ಕಾಯತೊಡಗಿದ್ದರು. ಬಂದಾರಿನ ಮೂಲಕ ನೀರು ಖಾಲಿಯಾಗುತ್ತಿದ್ದಂತೆ ಕೇಕೆ ಹಾಕುತ್ತ ನೀರಿಗಿಳಿದ ಜನರು ಸಿಕ್ಕ ಜಾಗದಲ್ಲಿ ಬಲೆಗಳನ್ನು ಹಾಕಿ ಜಾಳಿಸಿ ಮೀನಿನ ಬೇಟೆಯಾಡುತ್ತಿರುವುದು ಗಮನ ಸೆಳೆಯಿತು.
ವರ್ಷಕ್ಕೊಮ್ಮೆ ಮಾತ್ರ ಮತ್ಸ್ಯ ಬೇಟೆ
ಕಾಳಿ ನದಿ ಹಿನ್ನೀರಿನಲ್ಲಿ ಉಪ್ಪು ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಮೀನುಗಳು ಹೆಚ್ಚಾಗಿ ಮರಿ ಮಾಡಲು ಇಲ್ಲಿಗೆ ಬರುತ್ತವೆ. ಅಲ್ಲದೆ ಕಾಂಡ್ಲಾವನ ಪಾಚಿ ಇಲ್ಲಿರುವುದರಿಂದ ಆಹಾರವು ಸುಲಭವಾಗಿ ಸಿಗುತ್ತದೆ. ಜತೆಗೆ ಇಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಮೀನನ್ನು ಹಿಡಿಯುವುದರಿಂದ ಮತ್ಸ್ಯವೂ ಭರಪೂರವಾಗಿರುತ್ತದೆ. ಈ ಕಾರಣದಿಂದ ಪ್ರತಿ ವರ್ಷ ಬಂಡಿ ಹಬ್ಬದ ಮಾರನೇ ದಿನ ಮೀನು ಹಿಡಿಯಲು ಜನ ಜಾತ್ರೆಯೇ ನೆರೆಯುತ್ತದೆ.
ಹಿಡಿದ ಮೀನಿನ ಅರ್ಧ ಪಾಲು ನೀಡಬೇಕು ದೇವಸ್ಥಾನಕ್ಕೆ
ಗಿಂಡಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಮತ್ಸ್ಯ ಬೇಟೆ ನಡೆಯುತ್ತದೆ. ಸುತ್ತಮುತ್ತಲಿನ ಊರಿನ ನೂರಾರು ಜನರು ಬರುತ್ತಾರೆ. ಇಲ್ಲಿ ಮೀನು ಹಿಡಿಯುವುದಕ್ಕೆ ಯಾವುದೇ ಭೇದ ಭಾವ ಇಲ್ಲ. ಆದರೆ ಹಿಡಿದ ಮೀನನ್ನು ನೇರವಾಗಿ ತೆಗೆದುಕೊಂಡು ಹೋಗುವ ಹಾಗಿಲ್ಲ. ಅದರ ಅರ್ಧ ಪಾಲನ್ನು ದೇವಸ್ಥಾನಕ್ಕೆ ನೀಡಬೇಕು. ಆ ಪಾಲನ್ನು ಸಂಬಂಧಪಟ್ಟವರು ಹರಾಜಿನ ಮೂಲಕ ಕರೆದು ಬಂದ ಹಣವನ್ನು ದೇವಸ್ಥಾನದ ಅಭೀವೃದ್ಧಿಗೆ ಬಳಸಲಾಗುತ್ತದೆ.
ಇನ್ನು ಮೀನು ಹಿಡಿಯಲು ಬರುವಷ್ಟೆ ಜನರು ನೋಡಲು ಬರುತ್ತಾರೆ. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದವರು ಅಪರೂಪದ ಮತ್ಸ್ಯ ಬೇಟೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಅಲ್ಲದೆ ಕೆಲವರು ಖರೀದಿ ಮಾಡುತ್ತಾರೆ. ಆದರೆ ಮಾರುಕಟ್ಟೆಗಿಂತ ಇಲ್ಲಿ ಸಿಗುವ ಮೀನಿಗೆ ದರ ಸ್ವಲ್ಪ ಹೆಚ್ಚಾಗಿದ್ದರು ರುಚಿ ಜಾಸ್ತಿ.