ಕಾರವಾರ: ಭಟ್ಕಳದ ಬಾಲಕನ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಟ್ಟ ಹಣ ವಾಪಸ್ ಪಡೆಯಲು ಸ್ವತಃ ಅಜ್ಜನೇ ಮೊಮ್ಮಗನನ್ನು ಅಪಹರಣ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಸೌದಿ ಅರೇಬಿಯಾದಲ್ಲಿರುವ ಬಾಲಕನ ಅಜ್ಜ ಇನಾಯತುಲ್ಲಾ ಮೊಮ್ಮಗನ ಕಿಡ್ನ್ಯಾಪ್ಗೆ ಸ್ಕೆಚ್ ಹಾಕಿರುವ ಆರೋಪಿ. ಬಾಲಕನ ತಾಯಿಯ ಸಂಬಂಧಿಯಾಗಿರುವ ಇನಾಯತುಲ್ಲಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ.
ಸೋಮವಾರ ಗೋವಾದ ಕಲ್ಲಂಗುಟ್ ಬೀಚ್ ಸಮೀಪ ಬಾಲಕ ಪತ್ತೆಯಾಗಿದ್ದಾನೆ. ಬಾಲಕನ ಜತೆಗಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಬದ್ರಿಯಾ ನಗರದ ನಿವಾಸಿ ಕೋಳಿ ಅಂಗಡಿ ನಡೆಸುತ್ತಿದ್ದ ಅನೀಸ್ ಭಾಷಾ ಬಂಧಿತ ಆರೋಪಿ. ಬಾಲಕನ ಅಜ್ಜನ ಸೂಚನೆಯಂತೆ ಅನೀಸ್ ಭಾಷಾ ತಂಡದೊಂದಿಗೆ ಕಿಡ್ನ್ಯಾಪ್ ಮಾಡಿದ್ದಾನೆ. ಪ್ರಕರಣದ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಏನಿದು ಪ್ರಕರಣ ?: ಭಟ್ಕಳದಲ್ಲಿ ಆಗಸ್ಟ್ 20 ರಂದು ರಾತ್ರಿ ಅಂಗಡಿಗೆ ತೆರಳಿದ್ದ ಎಂಟು ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಒಟ್ಟು ನಾಲ್ವರು ಕಾರಿನಲ್ಲಿ ಬಂದು ಬಾಲಕನನ್ನು ಅಪಹರಿಸಿದ್ದರು. ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಮಧ್ಯರಾತ್ರಿ ಪ್ರಕರಣ ದಾಖಲಾಗಿತ್ತು. ಬಾಲಕನ ಹುಡುಕಾಟ ಹಾಗೂ ಆತನನ್ನು ಸುರಕ್ಷಿತವಾಗಿ ಕರೆತರಲು ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು.
ಇದನ್ನೂ ಓದಿ: ಸಂಬಂಧಿಕರಿಂದಲೇ ಅಪಹರಣಕ್ಕೊಳಗಾದ ಭಟ್ಕಳದ ಬಾಲಕನ ರಕ್ಷಣೆ, ಇಬ್ಬರ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಡಾ. ಸುಮನ್ ಪೆನ್ನೇಕರ್ ಮಾತನಾಡಿ, ಬಾಲಕನ ಅಜ್ಜ ಸೇರಿ ಇನ್ನೂ ನಾಲ್ವರು ಆರೋಪಿಗಳ ಬಂಧನಕ್ಕೆ ಪೊಲೀಸರು ತಯಾರಿ ನಡೆಸಿದ್ದಾರೆ. ಬಾಲಕನ ತಂದೆ ಮತ್ತು ಮಾವನ ನಡುವೆ ಹಣಕಾಸಿನ ವ್ಯವಹಾರವಿದ್ದು, ಇದೇ ಅಪಹರಣಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಈ ಹಿಂದೆ ಕೂಡ ಬಾಲಕನ ತಂದೆಗೆ ಬೆದರಿಕೆ ಹಾಕಲಾಗಿತ್ತು. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಪಹರಣಕ್ಕೆ ಒಳಗಾದ ಬಾಲಕನನ್ನು ಇಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಮೆಡಿಕಲ್ ಚೆಕ್ಅಪ್ಗೆ ಒಳಪಡಿಸಲಾಯಿತು. ನಂತರ ಬಾಲಕನನ್ನು ಭಟ್ಕಳ ನಗರ ಠಾಣೆಗೆ ಕರೆ ತಂದು, ಡಿವೈಎಸ್ಪಿ ಕೆ ಯು ಬೆಳ್ಳಿಯಪ್ಪ ಅವರ ಮುಂದಾಳತ್ವದಲ್ಲಿ ಕುಟುಂಬದವರಿಗೆ ಒಪ್ಪಿಸಲಾಗಿದೆ.