ಕಾರವಾರ (ಉ.ಕ): ಕಡಲ ನಗರಿಯ ಪ್ರವೇಶ ದ್ವಾರ ಎಂದೇ ಹೇಳಲಾಗುವ ಕೋಣೆವಾಡದಲ್ಲಿ ಇಡೀ ನಗರದ ಕೊಳಚೆ ನೀರನ್ನು ಒಂದೆಡೆ ಸೇರಿಸುವ ರಾಜಕಾಲುವೆ ಇದ್ದು, ಈ ಮಾರ್ಗವಾಗಿ ಓಡಾಡುವ ಜನರು ದುರ್ನಾತದಿಂದ ಮೂಗು ಮುಚ್ಚಿಕೊಂಡೇ ಸಾಗಬೇಕಾದ ಪರಿಸ್ಥಿತಿಯಿದೆ.
ಇಡೀ ನಗರದ ಕೊಳಚೆ ನೀರಿನ ಜೊತೆಗೆ ಸಾಕಷ್ಟು ಮನೆಗಳ ಶೌಚದ ನೀರೂ ಕೂಡ ಸೇರುತ್ತಿರುವುದರಿಂದ ಕೋಣೆನಾಲಾ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆ ಇತರ ಕ್ರಿಮಿಕೀಟಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೆ, ಇದೇ ಕೊಳಚೆ ನೀರು ನೇರವಾಗಿ ಸಮುದ್ರ ಸೇರುತ್ತಿದ್ದು, ನಗರಕ್ಕೆ ಬರುವ ಪ್ರವಾಸಿಗರು ಕೊಳಚೆ ಕಂಡು ನೀರಿಗಿಳಿಯುವುದಕ್ಕೂ ಅಸಹ್ಯ ಪಡುವಂತಾಗಿದೆ. ಕೊಳಚೆ ನೀರಿನಿಂದ ನಗರದ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳ ಹಿಂದೆ ನಗರಸಭೆ ವತಿಯಿಂದ ಕೋಣೆನಾಲಾದ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕ ಸ್ಥಾಪನೆ ಮಾಡಲಾಗಿತ್ತಾದರೂ ಅದು ಕೆಲವೇ ತಿಂಗಳಲ್ಲಿ ಸ್ಥಗಿತಗೊಂಡಿದೆ. ಕಳೆದೆರಡು ವರ್ಷಗಳ ಹಿಂದೆ ಶಾಸಕಿಯಾಗಿ ಆಯ್ಕೆಯಾದ ಆರಂಭದಲ್ಲಿಯೇ ರೂಪಾಲಿ ನಾಯ್ಕ, ನಮಾಮಿ ಗಂಗೆ ಯೋಜನೆಯಡಿ ಕೋಣೆನಾಲಾವನ್ನು ಶುದ್ಧೀಕರಿಸಲು ಮುಂದಾಗಿದ್ದರಾದರೂ ಬಳಿಕ ನೆನೆಗುದಿಗೆ ಬಿದ್ದಿತ್ತು. ರಾಜಕಾಲುವೆಗೆ ಹೊಂದಿಕೊಂಡೇ ಸಾಕಷ್ಟು ಮನೆಗಳು ಹಾಗೂ ಅಂಗನವಾಡಿ ಕೇಂದ್ರ ಕೂಡ ಇದ್ದು, ಕೊಳಚೆ ನೀರಿನಿಂದಾಗಿ ಇಲ್ಲಿನ ನಿವಾಸಿಗಳಲ್ಲಿ ಚರ್ಮ ರೋಗ ಸೇರಿದಂತೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.
ಕೊಳಚೆ ನೀರಿನ ಸಮಸ್ಯೆ ಕುರಿತು ಶಾಸಕಿಯನ್ನು ಕೇಳಿದ್ರೆ, ಕೋಣೆನಾಲಾವನ್ನು ವೈಜ್ಞಾನಿಕ ವಿಧಾನದಲ್ಲಿ ಶುದ್ಧೀಕರಿಸಬೇಕಾದ ಅಗತ್ಯತೆ ಇದ್ದು, ಇದಕ್ಕಾಗಿ ಸುಮಾರು 3.75 ಕೋಟಿ ವೆಚ್ಚದಲ್ಲಿ ಶಾಶ್ವತ ಪರಿಹಾರ ಒದಗಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ.