ಕಾರವಾರ: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಾರವಾರದಲ್ಲಿ ರಾಜಕೀಯ ವಿದ್ಯಮಾನಗಳು ಚುರುಕುಗೊಂಡಿವೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್ನಲ್ಲಿ ದೊಡ್ಡ ವೋಟ್ ಬ್ಯಾಂಕ್ ಆಗಿದ್ದ ಮೀನುಗಾರ ಸಮುದಾಯದವರು 'ಕೈ' ಬಿಟ್ಟು ಇದೀಗ ಕಮಲ ಹಿಡಿದಿದ್ದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಪ್ರತಿಭಟನೆ ನಡೆಸಿದವರೇ ಈಗ ಬಿಜೆಪಿಗೆ ಸೇರಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ 'ಸಾಗರ ಮಾಲ ಯೋಜನೆ'ಯಡಿ ಬಂದರು ವಿಸ್ತರಣೆ ಕಾಮಗಾರಿಗೆ ಸರ್ಕಾರ ಮುಂದಾಗಿತ್ತು. ಇದೇ ಮೀನುಗಾರ ಯುವಕರು ಹಾಗೂ ಮಹಿಳೆಯರು ಬಿಜೆಪಿ ಹಾಗೂ ಶಾಸಕಿ ರೂಪಾಲಿ ನಾಯ್ಕ ವಿರುದ್ದ ಪ್ರತಿಭಟನೆಗೆ ನಡೆಸಿದ್ದರು. ಶಾಸಕಿ ವಿರುದ್ಧ ಮನಬಂದಂತೆ ಟೀಕೆ, ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಬದಲಾಗಿ ರಾಜಕೀಯ ಸನ್ನಿವೇಶದಲ್ಲೀಗ ಬಿಜೆಪಿ ಸೇರ್ಪಡೆಯಾಗಿರುವುದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಬಿಜೆಪಿ ಶಾಸಕಿಯನ್ನು ತೆಗಳಿ, ಈಗ ಅವರದ್ದೇ ಪಕ್ಷಕ್ಕೆ ಸೇರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಟೀಕಿಸುತ್ತಿದ್ದಾರೆ. ಬಿಜೆಪಿ ಸೇರಿದ ಮೀನುಗಾರ ಮಹಿಳೆಯರು, ಯುವಕರು ನಿಂದನೆ ಮಾಡಹೊರಟವರ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
"ಈ ಹಿಂದೆ ಸಾಗರ ಮಾಲಾ ಹೋರಾಟ ಸಂದರ್ಭದಲ್ಲಿ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಬಿಜೆಪಿ ನಾಯಕರನ್ನು ಟೀಕಿಸಿ ಅವರ ವಿರುದ್ಧ ಎಲ್ಲರೂ ಘೋಷಣೆ ಕೂಗಿದ್ದರು. ಆ ಬಳಿಕ ಶಾಸಕಿ ಬಳಿ ತೆರಳಿ ಆಕ್ರೋಶದಲ್ಲಿ ಮಾತನಾಡಿದವರು ಕ್ಷಮೆ ಕೇಳಿದ್ದಾರೆ. ಆದರೆ ಇದೀಗ ಹಳೆ ವಿಡಿಯೋ ವೈರಲ್ ಮಾಡುತ್ತಿದ್ದು ಇದರ ವಿರುದ್ದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ" ಎಂದು ಪಕ್ಷಾಂತರಗೊಂಡಿರುವ ಯುವ ಮೀನುಗಾರ ಸಂಘಟನೆ ಅಧ್ಯಕ್ಷ ಚೇತನ್ ಹರಿಕಂತ್ರ ತಿಳಿಸಿದರು.
ಕಾರವಾರದಲ್ಲಿ ಕಾಂಗ್ರೆಸ್ಗೆ ಮೀನುಗಾರರು ದೊಡ್ಡ ವೋಟ್ ಬ್ಯಾಂಕ್ ಆಗಿದ್ದರು. ಮಾಜಿ ಶಾಸಕ ಸತೀಶ್ ಸೈಲ್ಗೆ ಬಿಜೆಪಿ ಸೇರಿದ ಹಲವರು ಬೆಂಬಲವಾಗಿ ನಿಂತಿದ್ದರು. ಬಂದರು ವಿಸ್ತರಣೆ ವಿರುದ್ಧ ಹೋರಾಟ ಮಾಡುವ ವೇಳೆ ಸತೀಶ್ ಸೈಲ್ ತಮಗೆ ಬೆಂಬಲ ನೀಡಿದ್ದರು ಎಂದು ಸೈಲ್ ಪರ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಸದ್ಯ ಬಿಜೆಪಿ ನಾಯಕರು ಮೀನುಗಾರ ಕೆಲ ಮುಖಂಡರನ್ನು ಮನವೊಲಿಸಿ ಕಾಂಗ್ರೆಸ್ನಿಂದ ಬಿಜೆಪಿಗೆ ಸೇರಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
"ಸಾಗರ ಮಾಲ ಯೋಜನೆಗೆ ಈಗಲೂ ನಮ್ಮ ವಿರೋಧವಿದೆ. ಮುಂದಿನ ದಿನದಲ್ಲಿ ಶಾಸಕರಾಗಿ ರೂಪಾಲಿ ನಾಯ್ಕ ಈ ಯೋಜನೆಯನ್ನು ಕಾರವಾರಕ್ಕೆ ತರದಂತೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ನಾವು ಬಿಜೆಪಿ ಸೇರಿದ್ದೇವೆ" ಎನ್ನುತ್ತಾರೆ ಮೀನುಗಾರ ಮುಖಂಡ ಆನಂದ್.
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಕ್ಷಾಂತರ ಸಹ ಚುರುಕುಗೊಂಡಿದೆ. ಜೆಡಿಎಸ್ ಪಕ್ಷದಲ್ಲಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಾಂಗ್ರೆಸ್ಗೆ ಸೇರಿ ಹಾಲಿ ಶಾಸಕಿ ರೂಪಾಲಿ ನಾಯ್ಕಗೆ ಸೆಡ್ಡು ಹೊಡೆಯಲು ಮಾಜಿ ಶಾಸಕ ಸತೀಶ್ ಸೈಲ್ಗೆ ಬೆಂಬಲ ಕೊಡಲು ಹೊರಟಿದ್ದಾರೆ. ಆದರೆ ಮತದಾರ ಯಾರ ಪರ ಒಲಿಯುತ್ತಾನೆ? ಎಂಬುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕುಮಟಾ ಕ್ಷೇತ್ರದತ್ತ ನಿವೇದಿತ್ ಆಳ್ವಾ ಚಿತ್ತ; ಕೈ ಜಾರುವ ಆತಂಕದಲ್ಲಿ ಟಿಕೆಟ್ ಆಕಾಂಕ್ಷಿಗಳು!