ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯಲಿರುವ ಸರ್ಕಾರಿ ಕಾರ್ಯಕ್ರಮ ಕದಂಬೋತ್ಸವಕ್ಕೆ ತಲಾ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವಂತೆ, ಮುಜರಾಯಿ ಇಲಾಖೆ ತನ್ನ ಅಧೀನದಲ್ಲಿ ಬರುವ ಎ ಮತ್ತು ಬಿ ವರ್ಗದ ದೇವಸ್ಥಾನಗಳಿಗೆ ಸೂಚನೆ ನೀಡಿದೆ. ಸದ್ಯ ಈ ಸುತ್ತೋಲೆಗೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಪ್ರತೀ ವರ್ಷ ಕದಂಬೋತ್ಸವ ಹಾಗೂ ಕರಾವಳಿ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಿಂದ ಹಾಗೂ ಖಾಸಗಿ ಉದ್ಯಮಿಗಳ ದೇಣಿಗೆ ಸಂಗ್ರಹಿಸಿ ಮಾಡಲಾಗುತಿತ್ತು. ಆದರೆ, ಉತ್ಸವಕ್ಕೆ ಅನುದಾನದ ಕೊರತೆಯಿಂದ ಜಿಲ್ಲಾಡಳಿತ ದೇವಸ್ಥಾನಗಳ ಮೊರೆ ಹೋಗಿದೆ. ಇದರಿಂದ ಸರ್ಕಾರಿ ಉತ್ಸವ ನಡೆಯಲು ಭಕ್ತರ ಹಣವೇಕೆ ಎಂಬ ಪ್ರಶ್ನೆಗಳು ಎದ್ದಿರುವ ನಡುವೆಯೂ ಕೆಲವು ದೇವಸ್ಥಾನಗಳು ಈಗಾಗಲೇ ಒಂದು ಲಕ್ಷ ಮೊತ್ತದ ಚೆಕ್ಗಳನ್ನು ನೀಡಿವೆ.
ಜಿಲ್ಲಾಧಿಕಾರಿಗಳೇ ಮುತುವರ್ಜಿ ವಹಿಸಿ ಕಾರ್ಯಕ್ರಮ ರೂಪಣೆ ಮಾಡುತ್ತಿದ್ದು, ದೊಡ್ಡ-ದೊಡ್ಡ ಕಲಾವಿದರನ್ನು ಕರೆಸಲು ಮುಂದಾಗಿದ್ದಾರೆ. ಇದಕ್ಕಾಗಿ 1 ಕೋಟಿ ರೂ. ಖರ್ಚನ್ನು ಅಂದಾಜಿಸಲಾಗಿದೆ. ಹೀಗಾಗಿ ದೊಡ್ಡ ಮಟ್ಟದ ದೇಣಿಗೆ ಸಂಗ್ರಹ ಅನಿವಾರ್ಯವಾಗಿದೆ. ಆದರೆ ಇದಕ್ಕೆ ಉದ್ಯಮಿಗಳಾಗಲಿ, ರಾಜಕಾರಣಿಗಳಾಗಲಿ ದೇಣಿಗೆ ನೀಡಲು ಮುಂದಾಗದ ಕಾರಣ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ತನ್ನದೇ ಇಲಾಖೆಯ ಸುಪರ್ದಿಯಲ್ಲಿರುವ ಮುಜರಾಯಿ ದೇವಸ್ಥಾನದ ಹುಂಡಿಗೆ ಕೈಹಾಕಿದೆ.
ಕಳೆದ ಜ.30 ರಂದು ಮುಜರಾಯಿ ಇಲಾಖೆಯಿಂದ ಎಲ್ಲಾ ಮುಜರಾಯಿ ದೇವಸ್ಥಾನಗಳಿಗೆ ನೋಟೀಸ್ ನೀಡಿದ್ದು, ಹಲವರು ಹಣವನ್ನು ದೇಣಿಗೆ ರೂಪದಲ್ಲಿ ನೀಡಿದರೆ ಇನ್ನು ಕೆಲವು ದೇವಸ್ಥಾನದ ಕಮಿಟಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲಾಡಳಿತ ಕೂಡ ನಾವು ಬಲವಂತವಾಗಿ ಆದೇಶಿಸಿಲ್ಲ, ಹಣದ ಕೊರತೆ ಇರುವ ಕಾರಣ ದೇಣಿಗೆ ನೀಡಿ ಎಂದಷ್ಟೇ ಸೂಚನೆ ನೀಡಿದ್ದೇವೆ ಎಂದು ಹೇಳುತ್ತಿದೆ. ಆದ್ರೆ ಕಡ್ಡಾಯವಾಗಿ ದೇಣಿಗೆ ನೀಡಲೇಬೇಕು ಎಂದು ಒತ್ತಡ ಹಾಕುತ್ತಿದ್ದಾರೆಂಬ ಆರೋಪವೂ ಕೇಳಿಬಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.