ಕಾರವಾರ: ಕರಾವಳಿ ಜಿಲ್ಲೆ ಉತ್ತರ ಕನ್ನಡವನ್ನು ಒಂದು ಕಾಲದಲ್ಲಿ ಜೆಡಿಎಸ್‌ನ ಭದ್ರಕೋಟೆ ಎಂದೇ ಹೇಳಲಾಗುತ್ತಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯ ನಂತರ ಇಲ್ಲಿ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆ ಪ್ರವೇಶಿಸಿದ ಬೆನ್ನಲ್ಲೇ ಪಕ್ಷದ ಬಲವರ್ಧನೆಗೆ ಬೂಸ್ಟರ್ ಸಿಕ್ಕಿದಂತಾಗಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ಸಿದ್ದವಾಗಿದೆ.
ಜನತಾ ಪರಿವಾರ ರಾಮಕೃಷ್ಣ ಹೆಗಡೆ, ಆರ್.ವಿ.ದೇಶಪಾಂಡೆ ಇರುವಾಗ ಜಿಲ್ಲೆಯಲ್ಲಿ ಜೆಡಿಎಸ್ ತನ್ನದೇ ನೆಲೆ ಹೊಂದಿತ್ತು. 2008ರ ಚುನಾವಣೆಯಲ್ಲೂ ಕುಮಟಾ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ 2013 ಹಾಗೂ 2018ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡ ನಂತರ ಜಿಲ್ಲೆಯಲ್ಲಿ ಪಕ್ಷ ಸಂಪೂರ್ಣ ನೆಲಕಚ್ಚಿತ್ತು. ಹಾಗಾಗಿ ಈ ಬಾರಿ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಅನುಮಾನ ಎನ್ನಲಾಗಿತ್ತು.
ಆದರೆ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮೂಲಕ ಜಿಲ್ಲೆಯಲ್ಲಿ ಸಂಚರಿಸಿರುವುದು ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಕುಮಟಾ ಹಾಗೂ ಭಟ್ಕಳ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಸುತ್ತಾಡಿ ಕುಮಟಾ ಕ್ಷೇತ್ರದ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಹಾಗೂ ಭಟ್ಕಳ ಕ್ಷೇತ್ರದ ಅಭ್ಯರ್ಥಿ ಇನಾಯಿತ್ ಉಲ್ಲಾ ಶಾಬಾಂದ್ರಿ ಪರ ಪ್ರಚಾರ ನಡೆಸಿದ್ದಾರೆ.
6 ಕ್ಷೇತ್ರದಲ್ಲೂ ಅಭ್ಯರ್ಥಿ ಕಣಕ್ಕೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್‌ಡಿಕೆ, "ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಭೇಟಿ ನೀಡಿದ್ದೆ. 3 ದಿನ ಪ್ರವಾಸ ಮಾಡಿ ಸಮಸ್ಯೆ ಅರಿತು ಪರಿಹಾರಕ್ಕೆ ಸೂಚಿಸಿದ ಬೆನ್ನಲ್ಲೇ ಸರ್ಕಾರ ಬಿದ್ದು ಹೋಗಿತ್ತು. ಇದೀಗ 2 ದಿನ ಪ್ರವಾಸ ಮಾಡಿ ಜಿಲ್ಲೆಯಲ್ಲಿರುವ ಸಮಸ್ಯೆ ಅರಿತಿದ್ದೇನೆ. ಪ್ರಮುಖವಾಗಿ ಅರಣ್ಯ ಅತಿಕ್ರಮಣದಾರರಿಗೆ ಪಟ್ಟಾ, ಮೀನುಗಾರರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ 6 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು" ಎಂದು ಘೋಷಣೆ ಮಾಡಿದರು.
ಕಾರವಾರ ಕ್ಷೇತ್ರದಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಹಳಿಯಾಳದಿಂದ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್, ಶಿರಸಿ ಕ್ಷೇತ್ರದಿಂದ ಉದ್ಯಮಿ ಉಪೇಂದ್ರ ಪೈ ಹಾಗೂ ಯಲ್ಲಾಪುರ ಕ್ಷೇತ್ರದಿಂದ ನಿವೃತ್ತ ಉಪನ್ಯಾಸಕ ನಾಗೇಶ ನಾಯ್ಕ ಕಾಗಲ ಅವರನ್ನ ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ. ಪಂಚರತ್ನ ಯಾತ್ರೆ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಸಂಚರಿಸಿದ್ದು, 2ನೇ ಹಂತದಲ್ಲಿ ಉಳಿದ ಕ್ಷೇತ್ರದಲ್ಲಿ ಸಂಚರಿಸಲಿದೆ. ಕನಿಷ್ಟ 3 ಕ್ಷೇತ್ರದಲ್ಲಿ ಈ ಬಾರಿ ಜಿಲ್ಲೆಯಲ್ಲಿ ಗೆಲುವು ಪಡೆಯುತ್ತೇವೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಜಿಲ್ಲೆಯಲ್ಲಿ ಜಾತಿ ಆಧಾರಿತ ಲೆಕ್ಕ ಹಾಕಿದ ಕುಮಾರಸ್ವಾಮಿ ನಾಮದಾರಿ, ಒಕ್ಕಲಿಗ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಹಲವು ಸಮುದಾಯದ ಮುಖಂಡರ ಜತೆ ಸಂಪರ್ಕ ಬೆಳೆಸಿ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜಕೀಯ ಗೊತ್ತಿಲ್ಲದ ಕಟೀಲ್ ತಮ್ಮ ಹೆಸರನ್ನು ಪಿಟೀಲೆಂದು ಬದಲಿಸಲಿ: ಹೆಚ್‌ಡಿಕೆ