ಕಾರವಾರ: ಸರ್ಕಾರ ಕೈಗಾರಿಕೆಗಳು ಬೆಳೆಯಲಿ, ಆರ್ಥಿಕ ಪ್ರಗತಿಯಾಗಲಿ, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕೆ ಕೈಗಾರಿಕಾ ವಲಯಗಳನ್ನು ಸ್ಥಾಪಿಸಿದೆ. ಅಲ್ಲದೇ, ಇದರಲ್ಲಿ ಆಸಕ್ತಿ ವಹಿಸಿದವರಿಗೆ ಕಡಿಮೆದರದಲ್ಲಿ ಜಾಗವನ್ನು ಸಹ ಕೊಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯ ಮಾಡಿತ್ತು. ಆದರೆ, ಗಡಿ ಜಿಲ್ಲೆ ಉತ್ತರಕನ್ನಡದ ಕಾರವಾರದ ಕೈಗಾರಿಕಾ ವಲಯದಲ್ಲಿ ಹೀಗೆ ಪಡೆದ ಜಾಗಗಳು ಕಳೆದ ಹಲವು ವರ್ಷಗಳಿಂದ ಬಾಗಿಲು ಹಾಕಿ ಪಾಳು ಬಿದ್ದಿದ್ದು, ಕೆಲವರು ವಸತಿ ಪ್ರದೇಶವನ್ನಾಗಿ ಮಾಡಿಕೊಂಡಿದ್ದಾರೆ.
ಕಾರವಾರ ತಾಲೂಕಿನ ಶಿರವಾಡ ಗ್ರಾಮದಲ್ಲಿ ಕೈಗಾರಿಕಾ ಇಲಾಖೆ 30 ವರ್ಷಗಳ ಹಿಂದೆ ಕೈಗಾರಿಕಾ ವಲಯವನ್ನ ಪ್ರಾರಂಭಿಸಿತ್ತು. ಇಲ್ಲಿ ಕೈಗಾರಿಕೆ ಪ್ರಾರಂಭಿಸಲು ಇಚ್ಚಿಸುವವರಿಗೆ ಕಡಿಮೆ ದರದಲ್ಲಿ ಭೂಮಿಯನ್ನ ಸಹ ನೀಡಲಾಗಿತ್ತು. ಈ ಕಾಲಘಟ್ಟದಲ್ಲಿ ಕೆಲ ಕೈಗಾರಿಕೆಗಳು ತಲೆ ಎತ್ತಿದ್ದವು. ಆದರೆ, ಕೆಲವೇ ವರ್ಷದಲ್ಲಿ ಅವುಗಳು ಮುಚ್ಚಲ್ಪಟ್ಟಿದ್ದು, ಇಂದಿಗೂ ಮರು ಪ್ರಾರಂಭವಾಗಿಲ್ಲ. ಕೈಗಾರಿಕಾ ವಲಯದಲ್ಲಿ ಸುಮಾರು 50ಕ್ಕೂ ಅಧಿಕ ಕೈಗಾರಿಕೆಗಳು ಬಂದ್ ಆಗಿದ್ದು, ಸುತ್ತಲೂ ಗಿಡಗಂಟೆಗಳು ಬೆಳೆದು ಪಾಳು ಬಿದ್ದಂತಾಗಿದೆ.
ಜಿಲ್ಲೆಯಲ್ಲಿ ಕೈಗಾರಿಕೆಗಳು ಇಲ್ಲದ ಕಾರಣ ಇಲ್ಲಿನ ಜನ ವಲಸೆ ಹೋಗುತ್ತಿದ್ದಾರೆ. ಕೂಡಲೇ ಸರ್ಕಾರ ಯಾರು ಕನಿಷ್ಟ ವರ್ಷಗಳ ಕಾಲ ಕೈಗಾರಿಕೆ ನಡೆಸುವುದಿಲ್ಲವೋ ಅಂತವರಿಂದ ಭೂಮಿಯನ್ನು ವಾಪಾಸ್ ಪಡೆದು ಬೇರೆಯವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಾರವಾರದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಿದಾಗ ಶಿರವಾಡ ಗ್ರಾಮ ಅಷ್ಟೊಂದು ಬೆಳೆದಿರಲಿಲ್ಲ. ಆದರೆ, ಸದ್ಯ ನಗರ ಮಟ್ಟದಲ್ಲಿಯೇ ಗ್ರಾಮ ಬೆಳೆದಿದ್ದು, ಗ್ರಾಮದಲ್ಲಿನ ಭೂಮಿಗೂ ಸಾಕಷ್ಟು ಬೆಲೆ ಇದೆ. ಈ ನಿಟ್ಟಿನಲ್ಲಿ ಕೈಗಾರಿಕೆ ಪ್ರಾರಂಭಿಸಲು ಜಾಗವನ್ನ ಪಡೆದವರು ಕೈಗಾರಿಕೆ ನಡೆಸದಿದ್ದರೂ ಸುಮ್ಮನೆ ಬಾಗಿಲು ಹಾಕಿಕೊಂಡು ಬಿಟ್ಟಿದ್ದಾರೆ.
ವಸತಿ ಪ್ರದೇಶವಾಗಿದೆ: "ಉತ್ತರಕನ್ನಡ ಜಿಲ್ಲೆಯ ಕಾರವಾರ ಗಡಿ ಜಿಲ್ಲೆ ಹಾಗೂ ಗಡಿ ತಾಲೂಕು ಕೂಡಾ ಹೌದು. ಇಲ್ಲಿ ನಾವು ಹೆಮ್ಮೆಪಡುವಂತಹ ಇಂಡಸ್ಟ್ರಿಗಳು ಯಾವುದೂ ಆಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಬೇರೆ ಬೇರೆ ಕಾರಣಗಳಿಂದ ಇದನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇಲ್ಲಿ ಗಡಿಭಾಗದಲ್ಲಿ ಮೂಡುಗೇರಿ ಎಂಬ ಗ್ರಾಮವಿದೆ. ಇಲ್ಲಿನ 200 ಎಕರೆ ಜಾಗವನ್ನು ಕೈಗಾರಿಕೆ ಪ್ರದೇಶಕ್ಕೆ ತೆಗೆದುಕೊಂಡು 20 ವರ್ಷ ಕಳೆದುಹೋಯ್ತು. ಅದರಲ್ಲಿ 70 ಎಕರೆಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದ ಜಾಗಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ. ಆ ಕೇಸ್ ಈಗ ನ್ಯಾಯಾಲಯದಲ್ಲಿದೆ. ಕಾರವಾರದಲ್ಲಿಯೂ ಮೊದಲಿಗೆ ಸಣ್ಣ ಕೈಗಾರಿಕೆಗಳು ಪ್ರಾರಂಭವಾಗಿತ್ತು. ತದನಂತರ ಅವರು ಅದನ್ನು ಮಾರಾಟ ಮಾಡಿದರು. ಹೀಗಾಗಿ, ಆ ಜಾಗವೀಗ ವಸತಿ ಪ್ರದೇಶವಾಗಿದೆ.
ಉತ್ತರಕನ್ನಡದಲ್ಲಿ ಅನೇಕ ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ. ಸರ್ಕಾರದ ವತಿಯಿಂದ ಪ್ರಯತ್ನ ಮಾಡಿ ಕೈಗಾರಿಕೆ ಸ್ಥಾಪಿಸುವವರಿಗೆ ಕಡಿಮೆ ದರದಲ್ಲಿ ವಿದ್ಯುತ್24 ತಾಸು ಕೊಡುವ ವ್ಯವಸ್ಥೆಯಾಗಬೇಕು. ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿಬೇಕು'' ಎಂದು ಸ್ಥಳೀಯರಾದ ಮಾಧವ ನಾಯಕ ಹೇಳಿದರು.
ಪುನಃ ಕೈಗಾರಿಕೆ ಪ್ರಾರಂಭಕ್ಕೆ ಕ್ರಮ: "ರಾಜ್ಯಾದ್ಯಂತ ಈ ಸಮಸ್ಯೆ ಇದ್ದು, ಜಂಟಿ ನಿರ್ದೇಶಕರ ಸಭೆಯಲ್ಲಿ ಸಚಿವರು ಖಾಲಿ ಬಿಟ್ಟಿರುವ ಕೈಗಾರಿಕಾ ಪ್ರದೇಶಗಳನ್ನು ಮರಳಿ ಪಡೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಪಾಳು ಬಿಟ್ಟ ಕೈಗಾರಿಕೆಗಳ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಆ ಪ್ರದೇಶದಲ್ಲಿ ಪುನಃ ಕೈಗಾರಿಕೆ ಪ್ರಾರಂಭಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು" ಎಂದು ಕೈಗಾರಿಕಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಸಾವರ್ಕರ್ ಫ್ಲೆಕ್ಸ್ ವಿವಾದ: ನಾಳೆ ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮವೆಂದ ಐಜಿಪಿ