ಕಾರವಾರ: ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟಲು ಆರಂಭದಿಂದಲೂ ಸತತ ಪ್ರಯತ್ನ ನಡೆಸಲಾಗುತ್ತಿದ್ದು, ಇದೀಗ ಉತ್ತರ ಕನ್ನಡ ಆರೋಗ್ಯ ಇಲಾಖೆ ಗಡಿರಾಜ್ಯ ಗೋವಾದಿಂದ ಆಗಮಿಸುವವರ ಮೇಲೆ ತೀವ್ರ ನಿಗಾ ಇರಿಸಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ.ಅಲ್ಲದೆ ಗೋವಾ ಹಾಗೂ ಮಹಾರಾಷ್ಟ್ರದಿಂದ ಮಾಜಾಳಿ ಮೂಲಕ ರಾಜ್ಯವನ್ನು ಪ್ರವೇಶಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆ ಇದೀಗ ಗಡಿಯಲ್ಲಿ ಪ್ರತಿ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದೆ.
ಜಿಲ್ಲೆಯಲ್ಲಿ ಆರಂಭದಿಂದಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಕಾರಣ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು ಏಳು ಜನರನ್ನು ತಪಾಸಣೆಗೊಳಪಡಿಸಲಾಗಿತ್ತಾದರೂ ಯಾವುದೇ ಸೊಂಕು ಪತ್ತೆಯಾಗಿಲ್ಲ. ಆದರೆ ಮುಂಜಾಗೃತಾ ವಹಿಸಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ತೀವ್ರ ನಿಗಾ ಇರಿಸಿದೆ.