ಕಾರವಾರ: ಪಾಕಿಸ್ತಾನದ ವಿರುದ್ಧದ ಯುದ್ಧ ಗೆಲುವಿನ ವರ್ಷಾಚರಣೆ ಹಿನ್ನೆಲೆ ಸಂಚರಿಸುತ್ತಿರುವ ಸ್ವರ್ಣಿಮ್ ವಿಜಯ ಜ್ಯೋತಿ ನಿನ್ನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಚಾಪೆಲ್ ವಾರ್‌ಶಿಪ್ ಮ್ಯೂಸಿಯಂ ತಲುಪಿದೆ. ಐಎನ್ಎಸ್ ಚಾಪೆಲ್ ಮ್ಯೂಸಿಯಂ ಆವರಣದಲ್ಲಿರುವ ಕಾರವಾರ ಮೂಲದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ರಾಮ್ ರಘೋಬಾ ರಾಣೆ ಅವರ ಪುತ್ಥಳಿಗೆ ವಿಜಯ ಜ್ಯೋತಿಯೊಂದಿಗೆ ಗೌರವ ಸಲ್ಲಿಸಲಾಯಿತು.
ಕದಂಬ ನೌಕಾನೆಲೆಯ ಕರ್ನಾಟಕ ನೇವಲ್ ಫ್ಲ್ಯಾಗ್ ಕಮಾಂಡಿಂಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್, ಪುಷ್ಷಗುಚ್ಛ ಅರ್ಪಿಸುವ ಮೂಲಕ 1948ರ ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದ ಮೇಜರ್ ರಾಣೆ ಅವರಿಗೆ ಗೌರವ ವಂದನೆ ಸಲ್ಲಿಸಿದರು.
ದಿವಂಗತ ಮೇಜರ್ ರಾಮ್ ರಘೋಬ ರಾಣೆಯವರು 1918ರ ಜೂನ್ 26ರಂದು ಕಾರವಾರದ ಚೆಂಡಿಯಾ ಗ್ರಾಮದಲ್ಲಿ ಜನಿಸಿದರು. ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು ಮತ್ತು ಯುದ್ಧಾನಂತರದ ಅವಧಿಯಲ್ಲಿ ಮಿಲಿಟರಿಯಲ್ಲಿದ್ದರು.
ಭಾರತೀಯ ಸೇನೆಯ ಇಂಜಿನಿಯರ್ಸ್ ಕಾರ್ಪ್ಸ್ ಆಫ್ ಬಾಂಬೆ ಸಪ್ಪರ್ಸ್ ರೆಜಿಮೆಂಟ್ನಲ್ಲಿ 15 ಡಿಸೆಂಬರ್ 1947ರಂದು ನಿಯೋಜನೆಗೊಂಡರು. 1948ರ ಏಪ್ರಿಲ್ನಲ್ಲಿ ಇಂಡೋ- ಪಾಕ್ ಯುದ್ಧದ ಸಂದರ್ಭದಲ್ಲಿ ಮೇಜರ್ ರಾಣೆ ಭಾರತೀಯ ಪಡೆಗಳು ರಜೌರಿ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹಲವಾರು ರಸ್ತೆ ತಡೆಗಳನ್ನು ಮತ್ತು ಮೈನ್ ಫೀಲ್ಡ್‌ಗಳನ್ನು ತೆರವುಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇದು ಭಾರತೀಯ ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಮುನ್ನಡೆಸಲು ಕಾರಣವಾಯಿತು.
ಇದನ್ನೂ ಓದಿ: ಉತ್ತರಕನ್ನಡ: ಬಂದ್ ಆಗಿದ್ದ ಜಲ ಸಾಹಸ ಕ್ರೀಡೆ ಆರಂಭಿಸಲು ಜಿಲ್ಲಾಡಳಿತದ ಗ್ರೀನ್ ಸಿಗ್ನಲ್
1948ರ ಏಪ್ರಿಲ್ 8ರಂದು ಮೇಜರ್ ರಾಮ್ ರೊಘೋಬಾ ರಾಣೆ ಅವರಿಗೆ ಯುದ್ಧದ ಸಂದರ್ಭದಲ್ಲಿ ಅವರ ಕೆಚ್ಚೆದೆಯ ಮತ್ತು ಧೈರ್ಯಶಾಲಿ ಕಾರ್ಯಗಳಿಗಾಗಿ ಪರಮವೀರ ಚಕ್ರ ಪ್ರದಾನ ಮಾಡಲಾಯಿತು. ಮೇಜರ್ ರಾಣೆ ಭಾರತೀಯ ಸೇನೆಯಿಂದ 1968ರಲ್ಲಿ ನಿವೃತ್ತರಾದರು. ಭಾರತೀಯ ಸೇನೆಯೊಂದಿಗಿನ ಅವರ 28 ವರ್ಷಗಳ ಸೇವೆಯಲ್ಲಿ ಮೇಜರ್ ರಾಮ್ ರಘೋಬಾ ರಾಣೆ ಅವರನ್ನು ಪ್ರಮುಖವಾಗಿ ಐದು ಘಟನೆಗಳಲ್ಲಿ ಉಲ್ಲೇಖಿಸಲಾಗಿರುವುದನ್ನು ಸ್ಮರಿಸಲಾಯಿತು.
ಈ ವೇಳೆ ದಿವಂಗತ ರಘೋಬಾ ರಾಣೆ ಅವರ ಪತ್ನಿ ರಾಜೇಶ್ವರಿ ಅವರಿಗೆ ಯುದ್ಧವಿಮಾನವಾಹಕ ನೌಕೆ ವಿಕ್ರಮಾದಿತ್ಯ ಹಡಗು ಇರುವ ಕಲಾಕೃತಿ ನೀಡಿ ಗೌರವ ಸಮರ್ಪಿಸಿದರು.