ಕಾರವಾರ: ಮಳೆಗೆ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಗುಡ್ಡ ಕುಸಿದು ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ. ಅದರಲ್ಲಿಯೂ ಗುಡ್ಡಗಳನ್ನು ಕೃತಕವಾಗಿ ಕೊರೆದ ಪ್ರದೇಶಗಳಲ್ಲಿಯೇ ಇಂತಹ ಅನಾಹುತಗಳು ಸಂಭವಿಸುತ್ತಿದ್ದು, ಅಮಾಯಕ ಜೀವಗಳು ಬಲಿಯಾಗುವಂತಾಗಿದೆ. ಆದರೆ ಇದೀಗ ಜಿಲ್ಲಾಧಿಕಾರಿ ಕಚೇರಿ ಸಮೀಪವೇ ಬೃಹತ್ ಗುಡ್ಡವನ್ನು ಕೊರೆದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಗುಡ್ಡದ ಬುಡದಲ್ಲಿ ವಾಸವಾಗಿರುವ ನೂರಾರು ಕುಟುಂಬಗಳಲ್ಲಿ ಆತಂಕ ಮನೆಮಾಡಿದೆ.
ನೌಕಾನೆಲೆಯಿಂದ ರಸ್ತೆ ಕಾಮಗಾರಿ: ಜಿಲ್ಲಾ ಕೇಂದ್ರ ಕಾರವಾರದ ಬೈತಖೋಲದಲ್ಲಿನ ನೌಕಾನೆಲೆಯಿಂದ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಇದು ಈ ಭಾಗದ ಜನರಲ್ಲಿ ಗುಡ್ಡ ಕುಸಿತದ ಭೀತಿ ಎದುರಿಸುವಂತೆ ಮಾಡಿದೆ. ನೌಕಾನೆಲೆ ವ್ಯಾಪ್ತಿಗೆ ಒಳಪಡುವ ಬೈತಖೋಲದ ಗುಡ್ಡದಲ್ಲಿ ಕಳೆದ ಕೆಲ ದಿನಗಳಿಂದ ಜೆಸಿಬಿಗಳನ್ನು ಉಪಯೋಗಿಸಿ ಗುಡ್ಡ ಕೊರೆದು ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ.
ಈ ಕಾಮಗಾರಿ ನಡೆಯುತ್ತಿರುವ ಗುಡ್ಡದ ಕೆಳ ಭಾಗದಲ್ಲಿ ನೂರಾರು ಮೀನುಗಾರರ ಮನೆಗಳಿವೆ. ಗುಡ್ಡದಲ್ಲಿ ಬೃಹತ್ ಪ್ರಮಾಣದ ಮಣ್ಣನ್ನು ತೆರವು ಮಾಡಿ ರಸ್ತೆ ನಿರ್ಮಾಣ ಮಾಡುತ್ತಿರುವ ಕಾರಣ, ಭಾರಿ ಮಳೆಯಲ್ಲಿ ಗುಡ್ಡ ಕುಸಿಯುವ ಭೀತಿ ಇಲ್ಲಿನ ಸ್ಥಳೀಯ ನಿವಾಸಿಗಳನ್ನು ಕಾಡತೊಡಗಿದೆ.
ಮೀನುಗಾರರ ಕುಟುಂಬಗಳಿಗೆ ಕಂಟಕ: ಈ ಹಿಂದೆ ಗುಡ್ಡದ ಬುಡದಲ್ಲಿ ರಸ್ತೆ ಕಾಮಗಾರಿಗೆ ಮುಂದಾದಾಗ ವಿರೋಧ ಮಾಡಿ ಜೆಸಿಬಿಗಳನ್ನು ವಾಪಸ್ ಕಳುಹಿಸಲಾಗಿತ್ತು. ಆದರೆ ಇದೀಗ ನೌಕಾನೆಲೆಯವರು ತಮ್ಮ ವ್ಯಾಪ್ತಿಗೊಳಪಡುವ ಗುಡ್ಡ ಪ್ರದೇಶದಲ್ಲಿ ಮಣ್ಣನ್ನು ತೆರವು ಮಾಡಿ ರಸ್ತೆ ಮಾಡುತ್ತಿದ್ದಾರೆ. ಹೀಗೆ ರಸ್ತೆ ಮಾಡಿ ಒಮ್ಮೆ ಕುಸಿತವಾದಲ್ಲಿ ಗುಡ್ಡದ ಬುಡದಲ್ಲಿಯೇ ವಾಸವಾಗುವ ನೂರಾರು ಮೀನುಗಾರರ ಕುಟುಂಬಗಳಿಗೆ ಕಂಟಕವಾಗಲಿದೆ.
ಈಗಾಗಲೇ ಗುಡ್ಡದ ಬುಡದಲ್ಲಿ ಕುಸಿತವಾಗಿದೆ. ಜಿಲ್ಲಾಡಳಿತದ ಕಣ್ಣಳತೆ ದೂರದಲ್ಲಿದ್ದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಬೇಕು ಎಂಬುದು ಮೀನುಗಾರರ ಆಗ್ರಹವಾಗಿದೆ. ಇನ್ನು ಜಿಲ್ಲೆಯಲ್ಲಿ ಗುಡ್ಡ ಕುಸಿತವಾದ ಭಟ್ಕಳದ ಮುಟ್ಟಳ್ಳಿ, ಅರೆಬೈಲ್ ಘಟ್ಟ, ಅಣಶಿ ಘಟ್ಟ, ಕಳಚೆ ಸೇರಿದಂತೆ ಬಹುತೇಕ ಕಡೆ ಕೃತಕವಾಗಿ ಮಣ್ಣು ತೆರವು ಮಾಡಿದ ಪ್ರದೇಶದಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತವಾಗಿದೆ.
ಇದನ್ನೂ ಓದಿ: ಭಟ್ಕಳದಲ್ಲಿ ಮನೆ ಮೇಲೆ ಗುಡ್ಡ ಕುಸಿದು ದುರಂತ: ಸ್ಥಳ ವೀಕ್ಷಣೆ ಮಾಡಿದ ಸಿಎಂ ಬೊಮ್ಮಾಯಿ
ಕಳೆದ ಕೆಲ ವರ್ಷದ ಹಿಂದೆ ಕಡವಾಡದಲ್ಲಿ ಗುಡ್ಡ ಕುಸಿತವಾದಾಗ 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇದೀಗ ಇಲ್ಲಿ ಗುಡ್ಡ ಕೊರೆದು ರಸ್ತೆ ನಿರ್ಮಾಣ ಮಾಡುತ್ತಿದ್ದು, ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಕಾಮಗಾರಿ ತಡೆದು ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಮೀನುಗಾರರ ಆಗ್ರಹವಾಗಿದೆ.
ಜನವಸತಿ ಪ್ರದೇಶದ ಬಳಿ ನೌಕಾನೆಲೆಯೂ ಗುಡ್ಡ ಕೊರೆದು ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು, ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ. ಜಿಲ್ಲೆಯಲ್ಲಿಯೂ ಹಲವು ಕಡೆ ಗುಡ್ಡ ಕುಸಿತವಾಗುತ್ತಿರುವ ಕಾರಣ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.